ಮೆಕ್ಕಾ: ಮುಸ್ಲಿಮರ ಪವಿತ್ರ ತಾಣ ಮೆಕ್ಕಾವನ್ನು ಗುರಿಯಾಗಿಸಿಕೊಂಡು ಉಗ್ರರು ಆತ್ಮಾಹುತಿ ಬಾಂಬ್ ದಾಳಿಗೆ ಯತ್ನಿಸಿದ್ದಾರೆ. ಆತ್ಮಾಹುತಿ ದಾಳಿ ವಿಫಲವಾದಾಗ ಗುಂಡಿನ ದಾಳಿ ನಡೆಸಿದ್ದು, ಯಾತ್ರಿಗಳು, ಭದ್ರತಾ ಸಿಬ್ಬಂದಿ ಸೇರಿದಂತೆ 11 ಮಂದಿ ಗಾಯಗೊಂಡಿದ್ದಾರೆ.
ಶುಕ್ರವಾರ ಮಧ್ಯಾಹ್ನದ ಪ್ರಾರ್ಥನೆ ಸಮಯದಲ್ಲೇ ಆತ್ಮಾಹುತಿ ಬಾಂಬ್ ದಾಳಿ ಯತ್ನ ನಡೆದಿದೆ. ರಂಜಾನ್ ಪ್ರಯುಕ್ತ ಸಾವಿರಾರು ಮಂದಿ ಪ್ರಾರ್ಥನೆಯಲ್ಲಿ ತೊಡಗಿದ್ದಾಗ ಮಸೀದಿಯ ಭದ್ರತಾ ಸಿಬ್ಬಂದಿ, ಯಾತ್ರಿಕರು ಹಾಗೂ ಆರಾಧಕರನ್ನು ಗುರಿಯಾಗಿಸಿಕೊಂಡು ಉಗ್ರರು ಆತ್ಮಾಹುತಿ ದಾಳಿಗೆ ಯತ್ನಿಸಿದ್ದಾರೆ. ಆದರೆ, ಪೊಲೀಸರ ಮುನ್ನೆಚ್ಚರಿಕೆಯಿಂದ ಭಾರಿ ದುರಂತ ತಪ್ಪಿದೆ.
ಮಸೀದಿ ಸುತ್ತ ಕೆಲ ಶಂಕಿತರು ಸುತ್ತಿದ್ದರು. ಇದರಿಂದ ಅನುಮಾನಗೊಂಡ ಪೊಲೀಸರು ಅನುಮಾನಸ್ಪದವಾಗಿ ಕಂಡ ಓರ್ವ ಮಹಿಳೆ ಸೇರಿದಂತೆ ಐವರನ್ನು ಬಂಧಿಸಿದ್ದರು. ಈ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ 6 ಯಾತ್ರಿಗಳು ಹಾಗೂ ಐವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.