ಉತ್ತರ ಪ್ರದೇಶ: ಬಿಜೆಪಿ ನಾಯಕರೊಬ್ಬರು ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಬುಲಂದ್‍ಶಹರ್ ಜಿಲ್ಲೆಯಲ್ಲಿ ದಂಡ ವಿಧಿಸಿದ ಮಹಿಳಾ ಪೊಲೀಸ್ ಅಧಿಕಾರಿ ಶ್ರೇಷ್ಠಾ ಠಾಕೂರ್ ಅವರನ್ನು ಶನಿವಾರ ವರ್ಗಾವಣೆ ಮಾಡಲಾಗಿದೆ.
ಅಲ್ಲಿನ ಸ್ಥಳೀಯ ಬಿಜೆಪಿ ಮುಖಂಡ ಮತ್ತು ಐವರು ಕಾರ್ಯಕರ್ತರನ್ನು ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದು ಮಾತ್ರವಲ್ಲದೆ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಕ್ಕಾಗಿ ಶ್ರೇಷ್ಠಾ ಜೈಲಿಗಟ್ಟಿದ್ದು, ಈ ಪ್ರಕರಣ ನಡೆದ ಒಂದೇ ವಾರದಲ್ಲಿ ಶ್ರೇಷ್ಠಾ ಅವರನ್ನು ಬಹರೈಚ್ ಎಂಬಲ್ಲಿಗೆ ವರ್ಗಾಯಿಸಲಾಗಿದೆ.
ಮುಖ್ಯಮಂತ್ರಿ ಆದಿತ್ಯನಾಥ ಯೋಗಿ ಅವರಿಗೆ ಶ್ರೇಷ್ಠಾ ಅವರು ದಂಡ ವಿಧಿಸಿದ್ದ ಪ್ರಕರಣದ ಬಗ್ಗೆ ಬಿಜೆಪಿಯ 11 ಶಾಸಕರು ಮತ್ತು ಸಂಸದರು ದೂರು ನೀಡಿದ್ದು, ಬಿಜೆಪಿ ನಾಯಕರ ವಿರುದ್ಧ ಕ್ರಮ ತೆಗೆದುಕೊಂಡ ಪೊಲೀಸ್ ಅಧಿಕಾರಿಯನ್ನು ಎತ್ತಂಗಡಿ ಮಾಡಬೇಕೆಂದು ಈ ಶಾಸಕ, ಸಂಸದರು ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರು.
ಬಿಜೆಪಿ ನೇತಾರ ಮುಖೇಶ್ ಭಾರದ್ವಾಜ್ ಮಾತನಾಡಿ ಶ್ರೇಷ್ಠಾ ಅವರು ಮುಖ್ಯಮಂತ್ರಿ ಆದಿತ್ಯನಾಥ ಮತ್ತು ಇತರ ನಾಯಕರ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದಾರೆ. ಆ ಕಾರಣದಿಂದಲೇ ಅವರನ್ನು ಎತ್ತಂಗಡಿ ಮಾಡುವಂತೆ ಒತ್ತಾಯಿಸಿದ್ದೆವು ಎಂದು ಹೇಳಿದ್ದಾರೆ.
ಸೈನಾ ಪ್ರದೇಶದಲ್ಲಿ ಶ್ರೇಷ್ಠಾ ಠಾಕೂರ್ ಮತ್ತು ಇತರ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದ ಸಂಧರ್ಭ ಹೆಲ್ಮೆಟ್ ಧರಿಸದೆ ಬಂದ ಮೋಟಾರ್ ವಾಹನ ಸವಾರರೊಬ್ಬರಿಗೆ 200 ರೂಪಾಯಿ ದಂಡ ವಿಧಿಸಿದ್ದಾರೆ. ತಾನು ಬಿಜೆಪಿ ನಾಯಕ ಪ್ರಮೋದ್ ಕುಮಾರ್, ತನ್ನ ಪತ್ನಿ ಬುಲಂದ್‍ಶಹರ್ ಜಿಲ್ಲಾ ಪಂಚಾಯತ್ ಸದಸ್ಯೆ ಎಂದು ಹೇಳಿದ್ದರೂ, ಪೊಲೀಸರು ಸುಮ್ಮನೆ ಬಿಡಲಿಲ್ಲ. ಈ ವಿಷಯ ಸಂಬಂಧ ಕುಮಾರ್ ಮತ್ತು ಠಾಕೂರ್ ವಿರುದ್ಧ ವಾಗ್ವಾದ ನಡೆದು, ಆ ಹೊತ್ತಲ್ಲಿ ಬಿಜೆಪಿ ನಾಯಕರಿಗೆ ಫೋನ್ ಮಾಡಿದ್ದ ಕುಮಾರ್, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಭಾರದ್ವಾಜ್, ಠಾಕೂರ್ ಮತ್ತು ಪೊಲೀಸರ ವಿರುದ್ಧ ಹರಿ ಹಾಯ್ದಿದ್ದಾರೆ. ಪೊಲೀಸರು ಕುಮಾರ್ ಅವರಲ್ಲಿ ಲಂಚ ಕೇಳಿ ಪೀಡಿಸಿದ್ದಾರೆ ಎಂದು ಆರೋಪಿಸಿ ಭಾರದ್ವಾಜ್ ಮತ್ತು ಬಿಜೆಪಿ ಕಾರ್ಯಕರ್ತರು ರಂಪಾಟ ನಡೆಸಿದ್ದು, ಬಿಜೆಪಿ ನಾಯಕರ ರಂಪಾಟಕ್ಕೆ ಬಗ್ಗದ ಶ್ರೇಷ್ಠಾ ಮಾತಿನಲ್ಲಿಯೇ ಛಡಿಯೇಟು ನೀಡಿ ಬಿಜೆಪಿ ಕಾರ್ಯಕರ್ತರ ಬೆವರಿಳಿಸಿದ್ದರು.