ಜಮ್ಮು: ಪಾಕಿಸ್ತಾನ ಸೈನಿಕರು ಯುದ್ಧ ವಿರಾಮ ಉಲ್ಲಂಘಿಸಿ ಮಾಡಿರುವಂತಹ ಗುಂಡಿನ ದಾಳಿಯಲ್ಲಿ ಭಾರತದ ಒಬ್ಬ ಕ್ಯಾಪ್ಟನ್ ಸಹಿತ ಮೂರು ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪೂಂಛ್ ಮತ್ತು ರಾಜೌರಿಯ ಲೈನ್ ಆಫ್ ಕಂಟ್ರೋಲ್(ಎಲ್ ಓಸಿ)ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ನಾಲ್ಕು ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ ಮತ್ತು 15 ವರ್ಷದ ಬಾಲಕಿಯೊಬ್ಬಳ ಸಹಿತ ನಾಲ್ಕು ಮಂದಿ ಗಾಯಗೊಂಡಿದ್ದಾರೆ ಎಂದು ಸೇನೆಯ ಪ್ರಕಟನೆಗಳು ಹೇಳಿವೆ.
ಪಾಕಿಸ್ತಾನದ ಗುಂಡಿನ ದಾಳಿಗೆ ಪ್ರತಿಯಾಗಿ ಭಾರತೀಯ ಸೈನಿಕರು ಕೂಡ ಗುಂಡಿನ ದಾಳಿ ನಡೆಸಿದ್ದಾರೆ. ಪಾಕಿಸ್ತಾನದ ಸೇನೆಯ ಹಲವಾರು ಪೋಸ್ಟ್ ಗಳನ್ನು ನಾಶ ಮಾಡಲಾಗಿದೆ ಎಂದು ಸೇನೆಯು ಹೇಳಿದೆ.
ದಾಳಿಯಲ್ಲಿ ಕ್ಯಾಪ್ಟನ್ ಕಪಲ್ ಕುಂದು, ರೈಫಲ್ ಮೆನ್ ರಾಮವತಾರ್, ರೈಫಲ್ ಮೆನ್ ಸುಭಂ ಸಿಂಗ್ ಮತ್ತು ರೋಶನ್ ಲಾಲ್ ಹುತಾತ್ಮರಾಗಿದ್ದಾರೆ.
ಪೂಂಛ್ ಮತ್ತು ರಾಜೌರಿ ಸೆಕ್ಟರ್ ನಲ್ಲಿ ಭಾನುವಾರ ರಾತ್ರಿ ಸುಮಾರು 11 ಗಂಟೆ ವೇಳೆಗೆ ಪಾಕಿಸ್ತಾನವು ದಾಳಿ ಮಾಡಿದೆ. ನಾಗರಿಕರು ಇರುವ ಪ್ರದೇಶಗಳಿಗೆ ಪಾಕಿಸ್ತಾನವು ದಾಳಿ ನಡೆಸಿದ್ದು, ಯುದ್ಧ ಸಂದರ್ಭದಲ್ಲಿ ಬಳಸುವಂತಹ ಸಣ್ಣ ಪ್ರಮಾಣದ ರಾಕೆಟ್ ಲಾಂಚರ್ ಗಳನ್ನು ಪಾಕ್ ಬಳಸಿದೆ ಎಂದು ಸೇನೆ ತಿಳಿಸಿದೆ.