ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರು ನಿಧನರಾಗಿ ಸರಿಯಾಗಿ ಒಂದು ವಾರ ಕೂಡ ಕಳೆದಿಲ್ಲ. ಅದಾಗಲೇ ಡಿಎಂಕೆಯಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ.
ಸೋಮವಾರ ಕರುಣಾನಿಧಿ ಹಿರಿಯ ಪುತ್ರ ಎಂಕೆ ಅಲಗಿರಿ ಅವರು ಕರುಣಾನಿಧಿ ಸಮಾಧಿಗೆ ಗೌರವ ಸಲ್ಲಿಸಿದ ಬಳಿಕ ಮಾತನಾಡಿ, ತನ್ನೊಂದಿಗೆ ಹಲವಾರು ಮಂದಿ ಶಾಸಕರು ಇದ್ದಾರೆ ಎಂದರು. ಆದರೆ ಡಿಎಂಕೆಯಲ್ಲಿ ತನಗೆ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಬೆಂಬಲ ತನಗೆ ಇದೆ ಎಂದು ಕರುಣಾನಿಧಿ ಇನ್ನೊಬ್ಬ ಪುತ್ರ ಎಂಕೆ ಸ್ಟಾಲಿನ್ ಹೇಳಿದ್ದಾರೆ.
ಡಿಎಂಕೆಯ ನಿಜವಾದ ಬೆಂಬಲಿಗರು ನನ್ನೊಂದಿಗೆ ಇದ್ದಾರೆ. ಸರಿಯಾದ ಸಮಯ ಬಂದಾಗ ಎಲ್ಲವೂ ನಿಮಗೆ ತಿಳಿದುಬರಲಿದೆ. ಏನು ನಡೆಯುತ್ತಿದೆಯೋ ಅದರಿಂದ ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಅಲಗಿರಿ ತಿಳಿಸಿದರು.
ಮಂಗಳವಾರ ಡಿಎಂಕೆ ಪಕ್ಷದ ಕಾರ್ಯನಿರ್ವಾಹಕ ಸಮಿತಿ ಸಭೆಯು ನಡೆಯು ಒಂದು ದಿನದ ಮೊದಲು ಅಲಗಿರಿ ನೀಡಿರುವ ಈ ಹೇಳಿಕೆಯು ಬಹಳಷ್ಟು ಕುತೂಹಲವನ್ನು ಉಂಟು ಮಾಡಿದೆ. ಈ ಸಭೆಯಲ್ಲಿ ಎಂಕೆ ಸ್ಟಾಲಿನ್ ಅವರನ್ನು ಪಕ್ಷದ ಉನ್ನತ ಹುದ್ದೆಗೇರಿಸುವ ಬಗ್ಗೆ ನಿರ್ಧಾರವಾಗುವ ಸಾಧ್ಯತೆಯಿದೆ.