ಇಸ್ಲಾಮಾಬಾದ್: ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾರತದ ಮಾಜಿ ಕ್ರಿಕೆಟಿಗ, ಪಂಜಾಬ್ ಸರ್ಕಾರದ ಸಚಿವ ನವಜೋತ್ ಸಿಂಗ್ ಸಿಧು ಭಾಗಿಯಾಗಿರುವುದು ಟೀಕೆಗೆ ಗುರಿಯಾಗಿದೆ.
ಪಾಕಿಸ್ತಾನದ 22ನೇ ಪ್ರಧಾನಿಯಾಗಿ ಇಮ್ರಾನ್ ಖಾನ್ ಶನಿವಾರ ಅಧಿಕಾರ ಸ್ವೀಕರಿಸಿದರು. ಶುಕ್ರವಾರ ನಡೆದ ವಿಶ್ವಾಸಮತಯಾಚನೆಯಲ್ಲಿ ಪಾಕಿಸ್ತಾನ ತೆಹ್ರೀಕ್ ಎ ಇನ್ಸಾಫ್(ಪಿಟಿಐ) ಅಧ್ಯಕ್ಷ ಇಮ್ರಾನ್ ಖಾನ್ ಸರಳ ಬಹುಮತದಿಂದ ಗೆದ್ದುಬಂದಿದ್ದಾರೆ.
ವಿಶ್ವಾಸಮತ ಯಾಚನೆಯಲ್ಲಿ ಇಮ್ರಾನ್ ಗೆ 176 ಮತ ಮತ್ತು ಪ್ರಧಾನಿ ಹುದ್ದೆಗೆ ಆಯ್ಕೆ ಬಯಸಿದ್ದ ಶಹಬಾಜ್ ಷರೀಫ್ ಗೆ 96 ಮತಗಳು ಸಿಕ್ಕಿವೆ.
ಸಮಾರಂಭದಲ್ಲಿ ಭಾಗಿಯಾಗಿದ್ದ ಪಾಕಿಸ್ತಾನದ ಸೇನಾ ದಂಡನಾಯಕ ಖಮರ್ ಜಾವೆದ್ ಬಾಜ್ವಾ ಅವರನ್ನು ಸಿಧು ಅಪ್ಪಿಕೊಂಡದ್ದು ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ಯ ಅಧ್ಯಕ್ಷ ಮಸೂದ್ ಖಾನ್ ಜತೆಗೆ ಮೊದಲ ಸಾಲಿನಲ್ಲಿ ಕುಳಿತುಕೊಂಡಿರುವುದು ಭಾರತದೆಲ್ಲೆಡೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಗಡಿಯಲ್ಲಿ ನಡೆಯುತ್ತಿರುವ ನುಸುಳುಕೋರರಿಗೆ ಬಾಜ್ವಾ ಸೇನೆಯಿಂದ ನೆರವು ನೀಡುತ್ತಿದ್ದಾರೆ ಎನ್ನುವ ಆರೋಪವಿದೆ.