ರೈಪುರ್: ಅಗಲಿದ ಅಜಾತಶತ್ರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ನುಡಿನಮನ ಸಲ್ಲಿಸುವ ವೇಳೆ ವೇದಿಕೆಯಲ್ಲಿದ್ದ ಛತ್ತೀಸ್ ಘರ್ ನ ಇಬ್ಬರು ಸಚಿವರು ನಗೆಕಡಲಲ್ಲಿ ತೇಲಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬುಧವಾರ ಅಟಲ್ ಬಿಹಾರ್ ವಾಜಪೇಯಿಗೆ ನುಡಿನಮನ ಸಲ್ಲಿಸುವ ವೇಳೆ ವೇದಿಕೆಯಲ್ಲಿದ್ದ ರಾಜ್ಯ ಕೃಷಿ ಸಚಿವ ಸಚಿವ ಬ್ರಿಜ್ಮೋಹನ್ ಅಗರ್ವಾಲ್ ಹಾಗೂ ಆರೋಗ್ಯ ಸಚಿವ ಅಜಯ್ ಚಂದ್ರಕರ್ ಅವರು ಮಾತಿನಲ್ಲಿ ಮಗ್ನರಾಗಿದ್ದಾರೆ. ಈ ವೇಳೆ ಇಬ್ಬರು ಯಾವುದರ ಪರಿಯೇ ಇಲ್ಲದಂತೆ ನಗೆ ಕಡಲಲ್ಲಿ ತೇಲಾಡಿದ್ದಾರೆ. ಈ ಎಲ್ಲ ದೃಶ್ಯಗಳು ಸೆರೆಯಾಗಿದ್ದು ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಗುವನ್ನು ಅರಗಿಸಿಕೊಳ್ಳಲಾಗದ ಚಂದ್ರಕಾರ್ ಮುಂದೆ ಇದ್ದ ಟೇಬಲ್ ಗೆ ಕೈ ಬಡಿದು ಬಿದ್ದು ಬಿದ್ದು ನಕ್ಕಿದ್ದಾರೆ. ಈ ವೇಳೆ ಪಕ್ಕದಲ್ಲಿದ್ದ ಧರ್ಮಲಾಲ್ ಕೌಶಿಕ್ ಚಂದ್ರಕಾರ್ ಅವರ ಕೈಯನ್ನು ಎಳೆದು ನಗು ನಿಲ್ಲಿಸುವಂತೆ ಎಚ್ಚರಿಸಿದ್ದಾರೆ.
ಮುಖ್ಯ ಅತಿಥಿಯಾಗಿ ರಮಣ್ ಸಿಂಗ್ ಕೂಡ ಅಲ್ಲಿಯೇ ಇದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಕಾಂಗ್ರೆಸ್ ನ ನಾಯಕರು ಇಬ್ಬರು ಸಚಿವರನ್ನು ಟಾರ್ಗೇಟ್ ಮಾಡಿ ಟೀಕಿಸುತ್ತಿದ್ದಾರೆ.
‘ಜೀವಂತವಾಗಿರುವಾಗ ಅಟಲ್ ಬಿಹಾರಿ ವಾಜಪೇಯಿಯನ್ನು ಕಡೆಗಣಿಸಿದ ಬಿಜೆಪಿ ನಾಯಕರು ಅವರ ಅಗಲಿಕೆಗೆ ಎಷ್ಟು ಗೌರವನ್ನು ನೀಡಿದೆ ಎಂದು ಗೊತ್ತಾಗುತ್ತದೆ ಎಂದು ಟೀಕಿಸಿದ್ದಾರೆ.