ನವದೆಹಲಿ: ದೆಹಲಿ ಮೂಲದ ಫ್ಯಾಶನ್ ಡಿಸೈನರ್ ಮತ್ತು ಅವರ ಮನೆಕೆಲಸದವ ತುಂಬಾ ನಿಗೂಢವಾಗಿ ಸಾವನ್ನಪ್ಪಿರುವಂತಹ ಘಟನೆಯು ಇಲ್ಲಿ ವಸಂತ್ ಕುಂಜ್ ಪ್ರದೇಶದಲ್ಲಿ ಬುಧವಾರ ರಾತ್ರಿ ನಡೆದಿದೆ.
53ರ ಹರೆಯದ ಫ್ಯಾಶನ್ ಡಿಸೈನರ್ ಮಾಲಾ ಲಖಾನಿ ಮತ್ತು ಆಕೆಯ ಮನೆಕೆಲಸದ ವ್ಯಕ್ತಿ 50ರ ಹರೆಯದ ಬಹದೂರ್ ಎಂಬವರು ವಸಂತ್ ಕುಂಜ್ ನ ಮನೆಯಲ್ಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಈ ಪ್ರಕರಣದಲ್ಲಿ ಪೊಲೀಸರು ತಕ್ಷಣವೇ ತನಿಖೆ ನಡೆಸಿ, ಮೂರು ಮಂದಿಯನ್ನು ಇದುವರೆಗೆ ಬಂಧಿಸಿರುವುದಾಗಿ ವರದಿಗಳು ಹೇಳಿವೆ. ಈ ಮೂವರು ತಮ್ಮ ಕೃತ್ಯವನ್ನು ಒಪ್ಪಿಕೊಂಡಿರುವುದಾಗಿ ವರದಿಗಳು ತಿಳಿಸಿವೆ.
ಫ್ಯಾಶನ್ ಡಿಸೈನರ್ ಅವರ ವರ್ಕ್ ಶಾಪ್ ನಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದ ರಾಹುಲ್ ಅನ್ವರ್ ಎಂಬಾತ ತನ್ನ ಇಬ್ಬರು ಸಂಬಂಧಿಗಳ ಜತೆಗೆ ಸೇರಿಕೊಂಡು ಈ ಕೃತ್ಯವೆಸಗಿದ್ದಾನೆ ಎಂದು ದೆಹಲಿ ಪೊಲೀಸ್ ಕಮಿಷನರ್ ಅಜಯ್ ಚೌಧರಿ ತಿಳಿಸಿದ್ದಾರೆ.
ದರೋಡೆ ನಡೆಸುವ ಉದ್ದೇಶದಿಂದ ಈ ಕೃತ್ಯವೆಸಗಿದ್ದಾರೆಂದು ತಿಳಿದುಬಂದಿದೆ.