ತಿರುವನಂತಪುರಂ: ಕೇರಳದ ಪಿಣರಾಯಿ ವಿಜಯನ್ ಅವರು ಶಬರಿಮಲೆಗೆ ಮಹಿಳೆ ಪ್ರವೇಶ ವಿಚಾರದಲ್ಲಿ ಕರೆದಿದ್ದ ಸರ್ವಪಕ್ಷ ಸಭೆಯಿಂದ ಬಿಜೆಪಿ ಹಾಗೂ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರೆಟಿಕ್ ಫ್ರಂಟ್(ಯುಡಿಎಫ್) ಹೊರನಡೆಯಿತು.
ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಿಂದಾಗಿ ರಾಜ್ಯದಲ್ಲಿ ಉಂಟಾಗಿರುವ ಬಿಕ್ಕಟ್ಟು ಶಮನ ಹಿನ್ನೆಲೆಯಲ್ಲಿ ಈ ಸಭೆ ಕರೆಯಲಾಗಿತ್ತು. ಆದರೆ ಬಿಜೆಪಿ ಹಾಗೂ ಯುಡಿಎಫ್ ಹೊರನಡೆಯುವ ಮೂಲಕ ಯಾವುದೇ ನಿರ್ಧಾರಕ್ಕೆ ಬರದೆ ಸಭೆ ಅಂತ್ಯಕಂಡಿತು.
ಸಭೆಯಿಂದ ಹೊರಬಂದು ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪಿ.ಎಸ್. ಶ್ರೀಧರನ್ ಪಿಳ್ಳೈ, ಸರ್ಕಾರ ಬಿಕ್ಕಟ್ಟು ಶಮನ ಮಾಡಲು ಪ್ರಾಮಾಣಿಕ ಯತ್ನ ಮಾಡುತ್ತಿಲ್ಲ. ನಾವು ಎರಡು ಗಂಟೆಗೂ ಹೆಚ್ಚಿನ ಸಮಯ ವ್ಯರ್ಥ ಮಾಡಿದೆವು ಎಂದು ಅವರು ಆರೋಪ ಮಾಡಿದರು.
ಸಮಸ್ಯೆ ಬಗೆಹರಿಸಲು ಇದ್ದ ಸುವರ್ಣಾವಕಾಶವನ್ನು ಸರ್ಕಾರ ಕಳಕೊಂಡಿದೆ. ಸರ್ಕಾರದ ಮೊಂಡುತನದಿಂದಾಗಿ ಸಭೆ ವಿಫಲವಾಗಿದೆ ಎಂದು ಕಾಂಗ್ರೆಸ್ ನಾಯಕ ರಮೇಶ್ ಚಿನ್ನಿತಲಾ ಆಕ್ರೋಶ ವ್ಯಕ್ತಪಡಿಸಿದರು.
ವಾರ್ಷಿಕ ಎರಡು ತಿಂಗಳ ಅವಧಿಯ ಮಂಡಲ ಮಕರವಿಲಕ್ಕು ನವೆಂಬರ್ 17ರಿಂದ ಆರಂಭವಾಗಲಿದೆ. ನ.16ರಂದು ದೇವಾಲಯದ ಬಾಗಿಲು ತೆರೆಯಲಾಗುವುದು.