ಚಂಢೀಗಡ: ಒಂದು ಕಾಲದಲ್ಲಿ ಗುಜರಿ ಹೆಕ್ಕಿ ಜೀವನ ಸಾಗಿಸುತ್ತಿದ್ದ ಬಿಜೆಪಿ ನಾಯಕ ರಾಜೇಶ್ ಕಾಲಿಯಾ ಅವರು ಚಂಢೀಗಡದ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಕಾಲಿಯಾ ಅವರ ಪರವಾಗಿ 27ರಲ್ಲಿ 16 ಮತಗಳು ಬಿದ್ದವು. ವಾಲ್ಮೀಕಿ ಸಮುದಾಯಕ್ಕೆ ಸೇರಿರುವ ಕಾಲಿಯಾ ಅವರ ತಂದೆ ಕುಂದನ್ ಲಾಲ್ ಅವರು ಕಸ ಗುಡಿಸುವ ವೃತ್ತಿ ಮಾಡುತ್ತಿದ್ದರು. ಕಾಲಿಯಾ ಅವರ ಸೋದರ ಈಗಲೂ ಕಸ ಗುಡಿಸುವ ಉದ್ಯೋಗ ಮಾಡುತ್ತಿದ್ದಾರೆ.
ತನ್ನ ಸಂಕಷ್ಟದ ದಿನಗಳನ್ನು ನೆನಪಿಸಿದ ಕಾಲಿಯಾ ಅವರು, ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ಶಾಲೆ ಬಿಟ್ಟ ಬಳಿಕ ಸೋದರನ ಜತೆಗೆ ಸೇರಿ ಗುಜರಿ ಹೆಕ್ಕುತ್ತಿದ್ದೆವು. ಅದು ದೊಡ್ಡ ಮಟ್ಟದಲ್ಲಿ ಸಂಗ್ರಹವಾದ ಬಳಿಕ ಮಾರಿ ಬಂದ ಹಣವನ್ನು ಕುಟುಂಬದ ನಿರ್ಹವಣೆಗೆ ವ್ಯಯಿಸುತ್ತಿದ್ದೆವು ಎಂದರು.
ಜೀವನದಲ್ಲಿ ತುಂಬಾ ಸಂಕಷ್ಟವನ್ನು ಎದುರಿಸಿದ್ದೇವೆ. ಭವಿಷ್ಯದಲ್ಲಿ ಯಾವುದೇ ರೀತಿಯ ಸವಾಲನ್ನು ಎದುರಿಸಲು ಸಿದ್ಧನಾಗಿದ್ದೇನೆ ಎಂದು ಹೇಳಿದರು.
1984ರಲ್ಲೇ ನಾನು ಬಿಜೆಪಿ ಹಾಗೂ ಆರ್ ಎಸ್ ಎಸ್ ಸೇರಿಕೊಂಡಿದ್ದೆ. ಬಿಜೆಪಿಯಿಂದಾಗಿ ನಾನು ಇಂದಿನ ಸ್ಥಾನಮಾನ ಪಡೆದಿದ್ದೇನೆ. ದೇಶದಲ್ಲಿ ಬಿಜೆಪಿ ಮಾತ್ರ ಚಾ ಮಾರುವವರನ್ನು ಪ್ರಧಾನಿ ಮತ್ತು ಗುಜರಿ ಹೆಕ್ಕುವವರನ್ನು ಮೇಯರ್ ಮಾಡಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.