ಇಟಾನಗರ: ಭಾರತೀಯ ಜನತಾ ಪಕ್ಷ(ಬಿಜೆಪಿ) ಅರುಣಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆಯೇ ಇಲ್ಲದೆ ಗೆಲುವು ದಾಖಲಿಸಿಕೊಂಡಿದೆ.
ಆಲೊ ಪೂರ್ವ ಮತ್ತು ಯಚೌಲಿ ಕ್ಷೇತ್ರಗಳಲ್ಲಿ ಎಪ್ರಿಲ್ 11ರಂದು ವಿಧಾನಸಭೆಗೆ ಚುನಾವಣೆಯು ನಡೆಯಲಿತ್ತು. ಆದರೆ ಬಿಜೆಪಿಯ ಕೆಂಟೊ ಜಿನಿ ಅವರು ಆಲೊ ಪೂರ್ವ ಕ್ಷೇತ್ರದಿಂದ ಮತ್ತು ಯಚೌಲಿ ಕ್ಷೇತ್ರದಿಂದ ತಾಬ ತೆದಿರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ ಮಾಧವ್ ಅವರು, ಅರುಣಾಚಲ ಪ್ರದೇಶದಿಂದ ಬಿಜೆಪಿ ಗೆಲುವು ಆರಂಭವಾಗಿದೆ ಎಂದು ಹೇಳಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ ಆಗಿರುವುದನ್ನು ಉಲ್ಲೇಖಿಸಿದ್ದಾರೆ.
60 ಸದಸ್ಯ ಬಲದ ಅರುಣಾಚಲ ಪ್ರದೇಶ ವಿಧಾನಸಭೆ ಚುನಾವಣೆಗೆ ಮೊದಲ ಹಂತದ ಚುನಾವಣೆಯು ಎಪ್ರಿಲ್ 11ರಂದು ನಡೆಯಲಿದೆ. ಅದೇ ದಿನ ಲೋಕಸಭೆಯು ಚುನಾವಣೆ ನಡೆಯಲಿದೆ.