ಶ್ರೀನಗರ: ಜಮ್ಮುಕಾಶ್ಮೀರದ ಬನಿಹಾಲ್ ನಲ್ಲಿ ಕಾರೊಂದು ಸ್ಪೋಟಗೊಂಡಿರುವ ಘಟನೆಯು ಶನಿವಾರ ನಡೆದಿದೆ.
ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿರುವ ಬನಿಹಾಲ್ ನಲ್ಲಿ ಸ್ಯಾಂಟ್ರೋ ಕಾರು ಸ್ಫೋಟಗೊಂಡಿದೆ. ಕಾರು ಸ್ಫೋಟಗೊಂಡ ವೇಳೆ ಸಿಆರ್ ಪಿಎಫ್ ಜವಾನರು ಅದೇ ಮಾರ್ಗವಾಗಿ ತೆರಳುತ್ತಿದ್ದರು ಎಂದು ವರದಿಗಳು ಹೇಳಿವೆ.
ಕಾರಿನ ಚಾಲಕ ಅಲ್ಲಿಂದ ಪರಾರಿಯಾಗಿದ್ದು, ಆತನ ಪತ್ತೆಗಾಗಿ ಕಾರ್ಯಾಚರಣೆ ನಡೆಯುತ್ತಿದೆ ಎಂಧು ತಿಳಿದುಬಂದಿದೆ. ಸಿಲಿಂಡರ್ ಸ್ಫೋಟಗೊಂಡ ಪರಿಣಾಮವಾಗಿ ಈ ಕಾರು ಸ್ಫೋಟಿಸಿದೆ. ಇದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಕಾರಿನಲ್ಲಿದ್ದ ಸಿಲಿಂಡರ್ ಸೋರಿಕೆಯಿಂದಾಗಿ ಸ್ಫೋಟ ನಡೆದಿದೆ. ಇದರಿಂದ ಕಾರಿಗೆ ಬೆಂಕಿ ಹತ್ತಿಕೊಂಡಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಬನಿಹಾಲ್ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇತ್ತೀಚೆಗೆ ಪುಲ್ವಾಮಾದಲ್ಲಿ ಇದೇ ರೀತಿ ಕಾರ್ ಸ್ಫೋಟ ನಡೆಸಿ ಸುಮಾರು 40 ಯೋಧರನ್ನು ಬಲಿ ಪಡೆಯಲಾಗಿತ್ತು. ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯು ಈ ಕೃತ್ಯವೆಸಗಿತ್ತು.