ನವದೆಹಲಿ: ಅಧಿಕಾರಿಯೊಬ್ಬರಿಗೆ ಬ್ಯಾಟ್ ನಿಂದ ಹಲ್ಲೆ ಮಾಡಿರುವ ಆಕಾಶ್ ವಿಜಯವರ್ಗೀಯ ಅವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂತಹ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ. ಆತ ಯಾರ ಮಗನೇ ಆಗಿದ್ದರೂ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಈ ರೀತಿ ವರ್ತಿಸುವವರನ್ನು ಪಕ್ಷದಿಂದ ನಿರ್ದಾಕ್ಷಿಣ್ಯವಾಗಿ ತೆಗೆಯಿರಿ ಎಂದು ನಿರ್ದೇಶಿಸಿದ್ದಾರೆ.
ಸಂಸದೀಯ ಸಭೆಯ ಬಳಿಕ ಬಿಜೆಪಿ ನಾಯಕ ರಾಜೀವ್ ಪ್ರತಾಪ್ ರೂಢಿ ಅವರು ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಇಂತಹ ನಡವಳಿಕೆಗಳು ಸ್ವೀಕಾರಾರ್ಹವಲ್ಲ, ಯಾರೇ ಆಗಲಿ, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ. ಪಕ್ಷಕ್ಕೆ ಕೆಟ್ಟ ಹೆಸರು ತರುವುದನ್ನು ಬಯಸುವುದಿಲ್ಲ. ಇದು ಪ್ರತಿಯೊಬ್ಬರಿಗೂ ಅನ್ವಯವಾಗುವುದು ಎಂದು ಮೋದಿ ಅವರು ಹೇಳಿರುವುದಾಗಿ ರೂಢಿ ತಿಳಿಸಿದರು.
ಮಧ್ಯಪ್ರದೇಶದ ಇಂಧೋರ್ ನ ಶಾಸಕ ಹಾಗೂ ಹಿರಿಯ ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗೀಯಾ ಅವರ ಪುತ್ರ ಆಕಾಶ್ ವಿಜಯವರ್ಗೀಯ ಅವರು ಸರ್ಕಾರಿ ಅಧಿಕಾರಿಗೆ ಬ್ಯಾಟ್ ನಿಂದ ಗಂಭೀರವಾಗಿ ಹಲ್ಲೆ ಮಾಡಿದ್ದರು.