ಮುಂಬಯಿ: ಮಹಾರಾಷ್ಟ್ರದಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಸರ್ಕಾರ ರಚಿಸಲು ಮುಂದಾಗಿದ್ದು, ನವಂಬರ್ 9ರಂದು ದೇವೇಂದ್ರ ಫಡ್ನವೀಸ್ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ವರದಿಗಳು ಹೇಳಿವೆ.
ಇಂದು ನಡೆಯಲಿರುವ ಬಿಜೆಪಿಯ ಶಾಸಕಾಂಗ ಪಕ್ಷದ ಸಭೆಯಲ್ಲಿ ಫಡ್ನವೀಸ್ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡುವ ಸಾಧ್ಯತೆಗಳು ಇವೆ. 105 ಮಂದಿ ಶಾಸಕರು ಈ ಸಭೆಯಲ್ಲಿ ಭಾಗಿಯಾಗುವರು. ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಬಿಜೆಪಿ ಉಪಾಧ್ಯಕ್ಷ ಅವಿನಾಶ್ ರೈ ಖನ್ನಾ ಅವರು ಸಭೆಯಲ್ಲಿ ಹಾಜರಿರುವರು.
ಬಿಜೆಪಿ ಸರ್ಕಾರ ರಚಿಸಲಿದೆ ಮತ್ತು ಯಾವುದೇ 50:50 ಫಾರ್ಮುಲಾ ಇಲ್ಲ. ನಾನೇ ಮುಂದಿನ ಐದು ವರ್ಷಗಳ ಕಾಲ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಫಡ್ನವೀಸ್ ನಿನ್ನೆ ಹೇಳಿದ್ದರು.
ಬಿಜೆಪಿ ಸಣ್ಣ ಪಕ್ಷಗಳು ಮತ್ತು ಪಕ್ಷೇತರರ ನೆರವು ಪಡೆದುಕೊಂಡು ಸರ್ಕಾರ ರಚಿಸುವ ಸಾಧ್ಯತೆಗಳು ಇವೆ ಎಂದು ವರದಿಗಳೂ ತಿಳಿಸಿವೆ. ಬಿಜೆಪಿ ಮೈತ್ರಿ ಪಕ್ಷ ಶಿವಸೇನೆ ಸಿಎಂ ಪಟ್ಟಕ್ಕೆ ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಸರ್ಕಾರ ರಚನೆ ವಿಳಂಬವಾಗಿದೆ.