ನವದೆಹಲಿ: ರಾಜ್ಯಸಭೆಯ ಮಾರ್ಷಲ್ ಗಳಿಗೆ ಸೇನಾ ಅಧಿಕಾರಿಗಳ ರೀತಿಯ ಯೂನಿಫಾರಂ ನೀಡಲಾಗುತ್ತಿದ್ದು, ಇದರ ಬಗ್ಗೆ ಮರುಪರಿಶೀಲಿಸಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ರಾಜ್ಯಸಭೆಯ ಸೆಕ್ರೆಟರಿಯಟ್ ಗೆ ಮನವಿ ಮಾಡಿರುವರು.
ರಾಜ್ಯಸಭೆಯಯ ಸ್ಪೀಕರ್ ಅವರ ಸೀಟಿನ ಹಿಂದುಗಡೆ ಮಾರ್ಷಲ್ ಗಳು ಸೇನಾ ಯೂನಿಫಾರಂನಲ್ಲಿ ಕಾಣಿಸಿಕೊಂಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಈ ಹೊಸ ಯೂನಿಫಾರಂ ಸೇನಾ ಅಧಿಕಾರಿಗಳು ಧರಿಸುವಂತೆ ಇದೆ. ನೀಲಿ ಬಣ್ಣದ ಯೂನಿಫಾರಂ ಜತೆಗೆ ಪೊಲೀಸರು ಮತ್ತು ಮಿಲಿಟರಿ ಧರಿಸುವಂತಹ ಕ್ಯಾಪ್ ಕೂಡ ನೀಡಲಾಗಿದೆ. ಇದಕ್ಕೆ ಮೊದಲು ಇದ್ದ ಯೂನಿಫಾರಂ ಟರ್ಬನ್ ಶೈಲಿಯಲ್ಲಿತ್ತು.
ಸೇನೆಯ ಮಾಜಿ ಮುಖ್ಯಸ್ಥ ವೇದ್ ಪ್ರಕಾಶ್ ಮಲಿಕ್ ಅವರು ಈ ಬಗ್ಗೆ ವಿರೋಧ ವ್ಯಕ್ತಪಡಿಸಿರುವರು. ಸೇನೆಯ ಯೂನಿಫಾರಂನ್ನು ನಕಲಿ ಮಾಡುವುದು ಕಾನೂನು ಬಾಹಿರ ಮತ್ತು ಇದು ಭದ್ರತೆಗೆ ಧಕ್ಕೆ ಉಂಟು ಮಾಡಬಹುದು. ಇದರ ಬಗ್ಗೆ ರಾಜ್ಯಸಭಾ ಸೆಕ್ರೆಟರಿಯಟ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶೀಘ್ರ ಕ್ರಮ ಕೈಗೊಳ್ಳಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.