ನವದೆಹಲಿ: ಶಿವಸೇನೆಯು ಕಾಂಗ್ರೆಸ್ ಹಾಗೂ ಎನ್ ಸಿಪಿ ಜತೆ ಸೇರಿಕೊಂಡು ಸರ್ಕಾರ ರಚನೆ ಮಾಡಿರುವುದು ಭಾರತೀಯ ಜನತಾ ಪಕ್ಷ(ಬಿಜೆಪಿ)ಕ್ಕೆ ಮಾಡಿರುವಂತಹ ದ್ರೋಹವಲ್ಲ, ಇದು ಜನಾದೇಶ ನೀಡಿದ ಮಹಾರಾಷ್ಟ್ರದ ಜನತೆಗೆ ಮಾಡಿರುವಂತಹ ಅವಮಾನ ಎಂದು ಗೃಹ ಸಚಿವ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಶಿವಸೇನೆಯು ಮಹಾರಾಷ್ಟ್ರದ ಜನತೆಗೆ ಅವಮಾನ ಮಾಡಿರುವರು, ಬಿಜೆಪಿಗಲ್ಲ ಎಂದು ಬಿಜೆಪಿ ಹಾಗೂ ಶಿವಸೇನೆ ಮೈತ್ರಿಗೆ ಜನಾದೇಶ ನೀಡಿರುವುದನ್ನು ಉಲ್ಲೇಖಿಸಿ ಹೇಳಿದರು.
ಜನಾದೇಶವನ್ನು ಯಾರು ಉಲ್ಲಂಘಿಸಿದ್ದಾರೆ ಎಂದು ನಾನು ಕೇಳಲು ಬಯಸುತ್ತೇನೆ. ನಾವು ಅದನ್ನು ಮುರಿದಿಲ್ಲ. ನಾವು ಶಾಸಕರನ್ನು ಹೊಟೇಲ್ ನಲ್ಲಿ ಬಂಧಿಸಿಡಲಿಲ್ಲ. ಶಾಸಕರನ್ನು ಕೂಡಿಟ್ಟವರು ತಪ್ಪು ಮಾಡಿಲ್ಲ? ಮೈತ್ರಿ ಮುರಿದವರು ತಪ್ಪು ಮಾಡಿಲ್ಲ? ಎಲ್ಲವನ್ನು ನಾವು ಮಾಡಿದ್ದೇವೆ ಎಂದು ದೂಷಿಸಲಾಗುತ್ತಿದೆ ಸರ್ಕಾರ ರಚಿಸದೆ ಇರುವುದು ನಮ್ಮ ತಪ್ಪಾಗಿದೆ ಎಂದು ಅವರು ಟೀಕೆಗಳಿಗೆ ಉತ್ತರಿಸಿದರು.
ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಮುಂದಾಗಿರುವ ಮೂರು ಪಕ್ಷಗಳು ತಮ್ಮ ತತ್ವ ಸಿದ್ಧಾಂತಗಳನ್ನು ಬದಿಗಿಟ್ಟು ಅಧಿಕಾರಕ್ಕೇರಿವೆ ಎಂದು ಅಮಿತ್ ಶಾ ಹೇಳಿದರು.