ಹೈದರಾಬಾದ್: ಯುವ ಪಶುವೈದ್ಯೆಯ ಅತ್ಯಾಚಾರಗೈದು ಹತ್ಯೆ ಮಾಡಿದ ನಾಲ್ಕು ಮಂದಿ ಆರೋಪಿಗಳಿಗೆ ಇಲ್ಲಿನ ಸ್ಥಳೀಯ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಶಾದ್ನಗರ್ ನಲ್ಲಿ ಇರುವ ಮಂಡಲ್ ಕಾರ್ಯನಿರ್ವಾಃಕ ಮ್ಯಾಜಿಸ್ಟ್ರೇಟ್ ಅವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದರು. ಪೊಲೀಸ್ ಠಾಣೆ ಹೊರಗಡೆ ಸ್ಥಳೀಯರು ಭಾರೀ ಪ್ರಮಾಣದಲ್ಲಿ ಸೇರಿ ಪ್ರತಿಭಟನೆ ನಡೆಸುತ್ತಿದ್ದ ಕಾರಣ ಮತ್ತು ನ್ಯಾಯಾಧೀಶರ ಅಲಭ್ಯತೆ ಕಾರಣದಿಂದಾಗಿ ಆರೋಪಿಗಳನ್ನು ಫಾಸ್ಟ್ ಟ್ರ್ಯಾಕ್ ಕೋರ್ಟ್ ಮುಂದೆ ಹಾಜರುಪಡಿಸಲಾಯಿತು.
ಆರೋಪಿಗಳಾಗಿರುವ ಮೊಹಮ್ಮದ್ ಅರಿಫ್, ಸಿ ಚೆನ್ನಕೇಶವುಲು, ಜೊಲ್ಲು ಶಿವು ಮತ್ತು ಜೊಲ್ಲು ನವೀನ್ ಎಂಬವರನ್ನು ಚಂಚಲಗೂಡ ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸಲಾಗಿದೆ.
ಪೊಲೀಸ್ ಠಾಣೆ ಮುಂದೆ ನೆರೆದಿದ್ದ ಪ್ರತಿಭಟನಾಕಾರರು ಅಲ್ಲಿಂದ ತೆರಳದೆ ಇದ್ದಾಗ ಪೊಲೀಸರು ಲಾಠಿ ಚಾರ್ಜ್ ನಡೆಸಿ ಜನರನ್ನು ಚದುರಿಸಿದರು.
ಇದೇ ವೇಳೆ ಆರೋಪಿಗಳ ಪರವಾಗಿ ವಾದಿಸದೆ ಇರಲು ಹೈದರಾಬಾದ್ ನ ವಕೀಲರ ಸಂಘವು ನಿರ್ಧರಿಸಿದೆ.