ಲಕ್ನೋ: ಬಲವಂತ ಅಥವಾ ಅಪ್ರಾಮಾಣಿಕ ಧಾರ್ಮಿಕ ಮತಾಂತರದ ವಿರುದ್ಧದ ಸುಗ್ರೀವಾಜ್ಞೆಗೆ ಉತ್ತರಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರು ಅಂಕಿತ ಹಾಕಿರುವರು ಎಂದು ಅಧಿಕಾರಿಯೊಬ್ಬರು ಮಾಹಿತಿಯನ್ನು ನೀಡಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಸಚಿವ ಸಂಪುಟವು ಈ ವಾರದ ಆರಂಭದಲ್ಲಿ ವಿವಾಹ ಸೇರಿದಂತೆ ಬಲವಂತದ ಹಾಗೂ ಅಪ್ರಮಾಣಿಕವಾದ ಮತಾಂತರ ತಡೆಯುವ ಕರಡು ಸುಗ್ರೀವಾಜ್ಞೆಗೆ ಅನುಮೋದನೆಯನ್ನ ನೀಡಿತ್ತು. ಈ ಕಾನೂನನ್ನು ಉಲ್ಲಂಘಿಸಿದವರಿಗೆ ಹತ್ತು ವರ್ಷದ ಕಾಲ ಜೈಲುಶಿಕ್ಷೆಯನ್ನು ನೀಡಬಹುದಾಗಿದೆ.
ಮಹಿಳೆಯರ ಮತಾಂತರವು ಬಲವಂತಯುತ ಮತ್ತು ಅಪ್ರಮುಖವಾಗಿದ್ದರೆ ಆ ಮದುವೆಯನ್ನು ಅನೂರ್ಜಿತ ಎಂದು ಘೋಷಿಸಲಾಗುತ್ತದೆ. ಮದುವೆಯ ನಂತರದಲ್ಲಿ ಧರ್ಮವನ್ನು ಬದಲಾಯಿಸುವವರು ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ಇತ್ತೀಚೆಗೆ ಬಿಜೆಪಿ ಆಡಳಿತದ ರಾಜ್ಯಗಳಾದ ಉತ್ತರಪ್ರದೇಶ, ಹರಿಯಾಣ, ಮತ್ತು ಮಧ್ಯಪ್ರದೇಶಗಳು ವಿವಾಹದ ಹೆಸರಿನಲ್ಲಿ ಹಿಂದೂ ಯುವತಿಯರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುವ ಆಪಾದಿತ ಪ್ರಯತ್ನಗಳನ್ನು ಎದುರಿಸಲು ಕಾನೂನನ್ನು ರೂಪಿಸುವ ಯೋಜನೆಯನ್ನು ಬಹಿರಂಗಪಡಿಸಿವೆ.