ವಾರಣಸಿ: ಹೊಸ ಕೃಷಿ ಕಾನೂನಿನಿಂದ ಕೃಷಿಕರಿಗೆ ಹೊಸ ಆಯ್ಕೆಗಳು ಹಾಗೂ ಕಾನೂನು ರಕ್ಷಣೆಯನ್ನು ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ತಿಳಿಸಿದರು.
ಕಳೆದ ಕೆಲವು ದಿನಗಳಿಂದ ದೆಹಲಿಯ ಗಡಿಭಾಗದಲ್ಲಿ ಕೃಷಿ ಕಾನೂನು ವಿರೋಧಿ ಪ್ರತಿಭಟನೆಗಳು ನಡೆಯುತ್ತಿದೆ.
ತನ್ನ ಸಂಸದೀಯ ಕ್ಷೇತ್ರ ವಾರಣಸಿಗೆ ಭೇಟಿ ನೀಡಿ ಮಾತನಾಡಿದ ಪ್ರಧಾನಿ ಅವರು, ಹೊಸ ಕೃಷಿ ಕಾಯ್ದೆಯು ಕೃಷಿಕರಿಗೆ ಹೊಸ ಆಯ್ಕೆ ಮತ್ತು ಹೊಸ ಕಾನೂನು ರಕ್ಷಣೆ ನೀಡಿದೆ. ಹಿಂದೆ ಮಾರುಕಟ್ಟೆ ಹೊರಗಿನ ಮಾರಾಟವು ಕಾನೂನುಬಾಹಿರ ಎಂದು ಪರಿಗಣಿಸಲಾಗಿತ್ತು. ಈಗ ಮಾರುಕಟ್ಟೆಯ ಹೊರಗಡೆ ಯಾವುದೇ ವ್ಯಾಪಾರ ನಡೆಸಿದರೂ ಕೃಷಿಕರು ಇದರ ಬಗ್ಗೆ ಕಾನೂನು ಹೋರಾಟ ನಡೆಸಬಹುದು. ಇದರಿಂದ ಅವರಿಗೆ ಹೊಸ ಆಯ್ಕೆ ಮತ್ತು ಕಾನೂನು ರಕ್ಷಣೆ ಸಿಕ್ಕಿದೆ ಎಂದು ವಿವರಿಸಿದರು.
ಮಾರುಕಟ್ಟೆಯ ವಿಸ್ತರಣೆ ಹೆಚ್ಚಿಸಿರುವ ಪರಿಣಾಮವಾಗಿ ಕೃಷಿಕರಿಗೆ ಆಯ್ಕೆಯು ಹೆಚ್ಚಾಗಿದೆ. ಕೃಷಿ ಕಾಯ್ದೆಯನ್ನು ಕೃಷಿಕರ ಹಿತಾಸಕ್ತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ತಯಾರಿಸಲಾಗಿದೆ ಎಂದು ಪ್ರಧಾನಿ ಅವರು ಸ್ಪಷ್ಟಪಡಿಸಿದರು.