ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ಹೊಸ ಕೃಷಿ ಕಾನೂನುಗಳ ವಿರುದ್ಧದ ರೈತ ಸಂಘಗಳ ಪ್ರತಿಭಟನೆಯಲ್ಲಿ ಹೊಸದೊಂದು ಬೆಳವಣಿಗೆಯಾಗಿದೆ. ಮುಂಬರುವ ದಿನಗಳಲ್ಲಿ ದೆಹಲಿಗೆ ಸೋನಿಪತ್, ರೋಹ್ಟಕ್, ಜೈಪುರ, ಗಾಜಿಯಾಬಾದ್-ಹಾಪುರ, ಮತ್ತು ಮಥುರಾ ಪ್ರವೇಶದ ಐದು ಮುಖ್ಯ ಪ್ರದೇಶಗಳನ್ನು ನಿರ್ಬಂಧಿಸುವುದಾಗಿ ರೈತರು ಭಾನುವಾರ ಘೋಷಿಸಿದರು. ಆದರೆ ಮೂವತ್ತಾರು ಕೃಷಿ ಸಂಘಗಳು ಮಾತುಕತೆಗಾಗಿ ಕೇಂದ್ರದ ಆಹ್ವಾನವನ್ನು ಸ್ವೀಕರಿಸಿದ್ದು, ಇಂದು ಸಭೆಯಲ್ಲಿ ಭಾಗವಹಿಸಲಿವೆ.
ಕಳೆದ ಆರು ದಿನಗಳಿಂದ ದೆಹಲಿಯ ಗಡಿಯಲ್ಲಿ ನೆಲೆಸಿರುವ ಪ್ರತಿಭಟನಾಕಾರ ರೈತರೊಂದಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೊದಲ ಸುತ್ತಿನ ಮಾತುಕತೆ ನಡೆಸಲಿದ್ದಾರೆ. 32 ಒಕ್ಕೂಟಗಳು ಪಂಜಾಬ್ನ ರೈತರಿಗೆ ಸೇರಿದ್ದು, ಹರಿಯಾಣದ ಇಬ್ಬರು ಪ್ರತಿನಿಧಿಗಳು, ಎಐಕೆಎಸ್ ಸಿಸಿಯ ಪ್ರತಿನಿಧಿ ಮತ್ತು ಉತ್ತರ ಪ್ರದೇಶದಿಂದ ಒಬ್ಬ ಮುಖಂಡರು ಮಾತುಕತೆಗೆ ಹಾಜರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನೊಂದೆಡೆ ಬಿಜೆಪಿ ಮುಖ್ಯ ನಾಯಕರುಗಳಾದ ಗೃಹ ಸಚಿವ ಅಮಿತ್ ಶಾ, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರಾಜನಾಥ್ ಸಿಂಗ್ ಹಾಗೂ ಇನ್ನಿತರರು ಇಂದು ಪಕ್ಷದ ಮುಖ್ಯಸ್ಥ ಜೆ.ಪಿ.ನಡ್ಡಾ ಅವರ ನಿವಾಸದಲ್ಲಿ ಸಭೆ ನಡೆಸಿದರು. ಅದರೊಂದಿಗೆ ಮುಂದೆ ನಡೆಯಲಿರುವ ರೈತರ ಜೊತೆಗಿನ ಸಭೆಯಲ್ಲಿ ತೆಗೆದುಕೊಳ್ಳಲಿರುವ ಮುನ್ನೆಚ್ಚರಿಕಾ ಕ್ರಮಗಳು ಅಂದರೆ “ಶೀತ ಮತ್ತು ಕೋವಿಡ್” ಗಮನದಲ್ಲಿರಿಸಿಕೊಂಡು ಸಭೆಯನ್ನು ಆಯೋಜಿಸಲಾಗುವುದು ಎಂದು ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದರು.
ಇದರೊಂದಿಗೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮಂಗಳವಾರ ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. “ನಾನು ನಿಮಗೆ ನೆನಪಿಸುತ್ತೇನೆ, ಶಾಂತಿಯುತ ಪ್ರತಿಭಟನಾಕಾರರ ಹಕ್ಕುಗಳನ್ನು ರಕ್ಷಿಸಲು ಕೆನಡಾ ಯಾವಾಗಲೂ ಇರುತ್ತದೆ. ಸಂಭಾಷಣೆಯ ಪ್ರಕ್ರಿಯೆಯನ್ನು ನಾವು ನಂಬುತ್ತೇವೆ. ಹಾಗೂ ಅದಕ್ಕೆ ಬೆಂಬಲ ನೀಡಲು ಭಾರತೀಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲು ಸಿದ್ಧವಿದ್ದೇವೆ” ಎಂದು ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಹೇಳಿದರು.♥