ಅಮರಾವತಿ: ಆಂಧ್ರಪ್ರದೇಶದ ಸರಕಾರ ಮಂಗಳವಾರ ಒಂದು ಮಹತ್ವದ ಕಾಯ್ದೆ ಜಾರಿಗೆ ತಂದಿದ್ದು, ಆನ್ ಲೈನ್ ಗೇಮ್ ಗಳ ವಿರುದ್ಧ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಚರ್ಚಿಸಿದೆ ಹಾಗೂ ಆನ್ ಲೈನ್ ಗೇಮ್ಸ್ಗಳನ್ನು ನಿಷೇಧಿಸುವ ನಿರ್ಧಾರ ಕೈಗೊಂಡಿದೆ.
ಆನ್ ಲೈನ್ ಗೇಮ್ ಗಳಿಂದ ಯುವಜನತೆಯ ಮೇಲೆ ಆಗುತ್ತಿರುವ ಪರಿಣಾಮ ಹಾಗೂ ಅದರಿಂದ ಉಂಟಾಗುತ್ತಿರುವ ಖಿನ್ನತೆಯನ್ನು ಗಮನದಲ್ಲಿರಿಸಿಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
ಗೇಮಿಂಗ್ ತಿದ್ದುಪಡಿ ಮಸೂದೆಯ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ, “ಇತ್ತೀಚಿನ ದಿನಗಳಲ್ಲಿ ಕೆಲವು ಯುವಕರು ಆನ್ಲೈನ್ ಗೇಮಿಂಗ್ನಿಂದಾಗಿ ಸಾಲಕ್ಕೆ ತಳ್ಳಲ್ಪಟ್ಟ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಹಾಗೂ ಈ ಮಸೂದೆಯನ್ನು ತರಲು ಇದೆ ಮುಖ್ಯ ಕಾರಣ” ಎಂದು ಹೇಳಿದರು.
ಗೇಮಿಂಗ್ ಕಾನೂನನ್ನು ತಿದ್ದುಪಡಿ ಮಾಡುವ ಹಿಂದಿನ ಉದ್ದೇಶವನ್ನು ವಿವರಿಸಿದ ಗೃಹ ಸಚಿವರು, ಆನ್ಲೈನ್ ಜೂಜಾಟವು ಸಮಾಜದಲ್ಲಿ ಕ್ರಿಮಿನಲ್ ನಡವಳಿಕೆಯನ್ನು ಪ್ರೇರೇಪಿಸುತ್ತದೆ ಮತ್ತು ಮನಿ ಲಾಂಡರಿಂಗ್ ಮತ್ತು ವಂಚನೆಯಂತಹ ಸಂಘಟಿತ ಅಪರಾಧಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಆನ್ಲೈನ್ ಗೇಮಿಂಗ್ ಅನ್ನು ತನ್ನ ವ್ಯಾಪ್ತಿಗೆ ತರಲು ಎಪಿ ಗೇಮಿಂಗ್ ಆಕ್ಟ್, 1974 ಅನ್ನು ತಿದ್ದುಪಡಿ ಮಾಡಲಾಗುತ್ತಿದೆ ಎಂದು ಗೃಹ ಸಚಿವೆ ಎಂ ಸುಚರಿತಾ ತಿಳಿಸಿದರು.
“ಜೂಜಿನ ಸೇವೆಗಳನ್ನು ಒದಗಿಸುವುದಾಗಿ ಹೇಳಿಕೊಳ್ಳುವ ಅನೇಕ ಅಂತರ್ಜಾಲ ವೆಬ್ಸೈಟ್ಗಳು ಅಧಿಕೃತವಲ್ಲ ಮತ್ತು ಈ ಸೈಟ್ಗಳ ನ್ಯಾಯಸಮ್ಮತತೆಯನ್ನು ಪರೀಕ್ಷಿಸಲು ಯಾವುದೇ ನಿಯಂತ್ರಕ ಕ್ರಮಗಳಿಲ್ಲ. ಇದು ಈ ಸೈಟ್ಗಳಿಗೆ ಗ್ರಾಹಕರನ್ನು ವಂಚಿಸುವುದು ನಿಜವಾಗಿಯೂ ಸುಲಭವಾಗಿಸುತ್ತದೆ ಮತ್ತು ಇದು ಸಾಕಷ್ಟು ಸುರಕ್ಷತೆ ಮತ್ತು ಗೌಪ್ಯತೆ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ ”ಎಂದು ಸಚಿವೆ ಸುಚರಿತಾ ಹೇಳಿದರು.