ತಿರುವನಂತಪುರಂ: ಬುರೆವಿ ಚಂಡಮಾರುತದ ಹಿನ್ನೆಲೆಯಲ್ಲಿ ಶುಕ್ರವಾರ ಕೇರಳ ರಾಜ್ಯದ ಐದು ಜಿಲ್ಲೆಗಳಲ್ಲಿ ಸಾರ್ವಜನಿಕ ರಜೆಯನ್ನು ಕೇರಳ ಸರ್ಕಾರ ಘೋಷಿಸಿದೆ.
ಕೇರಳದ ತಿರುವನಂತಪುರಂ, ಕೊಲ್ಲಂ, ಪಥನಮತ್ತಟ್ಟ, ಅಲ್ಫುಜಾ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ರಜೆಯನ್ನು ಘೋಷಿಸಲಾಗಿದೆ.
ಬುರೆವಿ ಚಂಡಮಾರುತದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಟ್ಯುಟಿಕೋರಿನ್ ವಿಮಾನ ನಿಲ್ದಾಣವನ್ನು ಮಧ್ಯಾಹ್ನ 12 ಗಂಟೆಯವರೆಗೂ ಮುಚ್ಚಲಾಗಿದೆ. ಮಧ್ಯಾಹ್ನದ ನಂತರ ನಾಲ್ಕು ದೇಶಿಯ ವಿಮಾನಗಳು ಸೇವೆ ಕಲ್ಪಿಸಲಿವೆ.
ಆದಾಗ್ಯೂ, ಮಧ್ಯಾಹ್ನ ಉಂಟಾಗುವ ಚಂಡಮಾರುತದ ಪರಿಸ್ಥಿತಿಯನ್ನು ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು, ಇಲ್ಲಿಯವರೆಗೂ ವಿಮಾನಗಳ ಸೇವೆ ರದ್ದುಗೊಂಡಿಲ್ಲ, ಆದರೆ, ಸೇವೆಯಲ್ಲಿ ವಿಳಂಬವಾಗಬಹುದು ಎಂದು ಮೂಲಗಳು ಹೇಳಿವೆ.
ಚಂಡಮಾರುತದಿಂದ ಉಂಟಾಗುವ ಪರಿಸ್ಥಿತಿಯನ್ನು ನಿಭಾಯಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಜೆಯ ಎಂಟು ತಂಡಗಳನ್ನು ಮಧ್ಯ ಮತ್ತು ದಕ್ಷಿಣ ಕೇರಳದಲ್ಲಿ ನಿಯೋಜಿಸಲಾಗಿದೆ.