ನವದೆಹಲಿ: ಇದಾಗಲೇ ಭಾರತೀಯ ಅಂತರ್ಜಾಲ ವ್ಯವಸ್ಥೆಯಲ್ಲಿ 4 ಜಿ ನೆಟ್ವರ್ಕ್ ಸೇವೆ ಎಲ್ಲೆಡೆ ದೊರೆಯುತ್ತಿದ್ದು 5 ಜಿ ಸೇವೆ ಸದ್ಯದಲ್ಲೇ ಎಲ್ಲರಿಗೂ ಲಭ್ಯವಾಗಲಿದೆ. ಈ ಸೇವೆ ಸ್ವದೇಶಿ ಅನುಷ್ಠಾನದಲ್ಲಿ ಎದ್ದು ನಿಲ್ಲಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಚೇರ್ಮನ್ ಮುಕೇಶ್ ಅಂಬಾನಿ ಮಂಗಳವಾರ ಹೇಳಿದ್ದಾರೆ.
ಇಂಡಿಯಾ ಮೊಬೈಲ್ ಕಾಂಗ್ರೆಸ್ ಅನ್ನು ಉದ್ದೇಶಿಸಿ ಮಾತನಾಡುವ ಸಮಯದಲ್ಲಿ ಅಂಬಾನಿ, ‘ಆತ್ಮನಿರ್ಭರ ಭಾರತಕ್ಕೆ ಆದರ್ಶವೆನಿಸುವಂತೆ ಮೂಡಿಬರಲಿರುವ 5ಜಿ ಸೇವೆಯು ಭಾರತದಲ್ಲಿ ನಾಲ್ಕನೆ ಕೈಗಾರಿಕಾ ಕ್ರಾಂತಿಗೆ ಮುನ್ನುಡಿ ಬರೆಯಲಿದೆ. ಅದರೊಂದಿಗೆ ಜಿಯೋ ಪರಿಚಯಿಸುವ 5ಜಿ ಸೇವೆಯು ನಿಮ್ಮ ಪ್ರೇರಣಾದಾಯಿ ಆಗಲಿದೆ’ ಎಂದು ವಿಶ್ವಾಸದ ಮಾತುಗಳನ್ನಾಡಿದರು.
ಜಿಯೋ ಮತ್ತು ಇತರೆ ನೆಟ್ವರ್ಕ್ ಏಜೆನ್ಸಿಗಳಾದ ಭಾರ್ತಿ ಏರ್ಟೆಲ್, ಐಡಿಯಾ, ವೊಡಾಫೋನ್ ಮುಂತಾದವು 4 ಜಿ ನೆಟ್ವರ್ಕ್ ಸೇವೆಯನ್ನು ಒದಗಿಸುತ್ತಿದ್ದರು, ದೇಶದಲ್ಲಿ ಇನ್ನೂ 2ಜಿ ಬಳಸುವವರು 30 ಕೋಟಿಗೂ ಹೆಚ್ಚಿದ್ದಾರೆ. ಅಂತಹ ಜನರಿಗೂ ಕೈಗೆಟುಕುವ ದರದಲ್ಲಿ ಈ ಸೇವೆಯನ್ನು ಒದಗಿಸುವ ಆಲೋಚನೆ ಮಾಡಲಾಗುತ್ತಿದೆ. ಆದರೆ ಸ್ಮಾರ್ಟ್ ಫೋನ್ ಖರೀದಿಸಲು ಹಾಗೂ ಡಿಜಿಟಲ್ ಸೇವೆಗಳನ್ನು ಪ್ರತಿಯೊಬ್ಬರಿಗೂ ಒದಗಿಸಲು ಸರಕಾರ ಹೊಸ ಯೋಜನೆಗಳನ್ನು ರೂಪಿಸಬೇಕು ಎಂದು ಅಂಬಾನಿ ತಿಳಿಸಿದರು.