ಫಿಜರ್, ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೋವಿಡ್ -19 ಲಸಿಕೆಯ ತುರ್ತು-ಬಳಕೆಯ ಅನುಮೋದನೆಗಾಗಿ ಅರ್ಜಿಗಳನ್ನು ಪರಿಶೀಲಿಸಲು ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ತಜ್ಞರ ಸಮಿತಿ ಇಂದು ಸಭೆ ಸೇರಿದೆ.
ಕರೋನ ವೈರಸ್ ಲಸಿಕೆ ಕೋವಾಕ್ಸಿನ್ಗೆ ತುರ್ತು ಬಳಕೆಯ ಅನುಮತಿ ಕೋರಿ ಹೈದರಾಬಾದ್ ಮೂಲದ ಫಾರ್ಮಾ ಸಂಸ್ಥೆ ಭಾರತ್ ಬಯೋಟೆಕ್ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ ಅರ್ಜಿ ಸಲ್ಲಿಸಿದ ನಂತರ ಸಭೆ ಕರೆಯಲು ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ನಿರ್ಧರಿಸಿತ್ತು.
ಈ ಸಭೆಯಲ್ಲಿ ಫಿಜರ್, ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ನ ಕ್ಲಿನಿಕಲ್ ಟ್ರಯಲ್ ಡೇಟಾ ಮತ್ತು ಈ ಕಂಪನಿಗಳು ಅಭಿವೃದ್ಧಿಪಡಿಸಿದ ಲಸಿಕೆಗಳ ಪರಿಣಾಮ ಹಾಗೂ ಅವುಗಳ ಅಡ್ಡಪರಿಣಾಮಗಳು ಹಾಗೂ ಪ್ರಯೋಗದ ಕುರಿತು ಚರ್ಚೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕೋವಿಡ್-19 ವಿರುದ್ಧ ಅದರ ಲಸಿಕೆ 90% ಕ್ಕಿಂತ ಹೆಚ್ಚು ಪರಿಣಾಮಕಾರಿ ಎಂದು ಫಿಜರ್ ಹೇಳಿಕೊಂಡಿದೆ.
ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾವು, ತನ್ನ ಆಕ್ಸ್ಫರ್ಡ್ ಕೋವಿಡ್ -19 ಲಸಿಕೆ, ಕೋವಿಶೀಲ್ಡ್ ಗೆ ಡಿಸೆಂಬರ್ 6 ರಂದು ಅನುಮತಿ ಕೋರಿತು. ಅಸ್ಟ್ರಾಜೆನೆಕಾ-ಆಕ್ಸ್ಫರ್ಡ್ ಪ್ರಕಟಿಸಿದ ಆರಂಭಿಕ ಮಾಹಿತಿಯ ಪ್ರಕಾರ ಕೋವಿಡ್ -19 ಲಸಿಕೆ ಸರಾಸರಿ ಶೇಕಡಾ 70 ರಷ್ಟು ಪರಿಣಾಮಕಾರಿಯಾಗಿದೆ ಎಂದಿದೆ.
ಭಾರತ್ ಬಯೋಟೆಕ್ ತನ್ನ 3 ನೇ ಹಂತದ ಪ್ರಯೋಗವನ್ನು ನವೆಂಬರ್ ಮಧ್ಯದಲ್ಲಿ ಪ್ರಾರಂಭಿಸಿತು. ಹೈದರಾಬಾದ್ ಮೂಲದ ಸಂಸ್ಥೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ) ಸಹಯೋಗದೊಂದಿಗೆ ಲಸಿಕೆ ಅಭಿವೃದ್ಧಿಪಡಿಸುತ್ತಿದೆ.