ನಾಗ್ಪುರ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಶರತ್ ಅರವಿಂದ್ ಬೋಬ್ಡೆ ಅವರ ತಾಯಿ ಮುಕ್ತಾ ಬೋಬ್ಡೆ ಅವರಿಗೆ ಸುಮಾರು 2.5 ಕೋಟಿ ರೂ. ವಂಚಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮುಕ್ತಾ ಬೊಬ್ದೆ ಅವರ ಆಸ್ತಿಯ ನೋಡಿಕೊಳ್ಳುತ್ತಿದ್ದ 49 ವರ್ಷದ ತಪಸ್ ಘೋಷ್ ಎಂಬಾತ ಈ ಕೃತ್ಯವನ್ನೆಸಗಿದ್ದು, ಆತನನ್ನು ಬಂಧಿಸಲಾಗಿದೆ ಎಂದು ನಾಗ್ಪುರ ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಸಿದಂತೆ ಡಿಸಿಪಿ ವನಿತಾ ಸಾಹು ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಅದು ತನಿಖೆಯ ನೇತೃತ್ವ ವಹಿಸಿಕೊಂಡಿದೆ ಎಂದು ನಾಗ್ಪುರ ಪೊಲೀಸ್ ಅಮಿತೇಶ್ ಕುಮಾರ್ ಹೇಳಿದ್ದಾರೆ.
ನಾಗ್ಪುರದ ಆಕಾಶವಾಣಿ ಸ್ಕ್ವೇರ್ ಸಮೀಪ ಇರುವ ಹಾಲ್ನ ಮಾಲೀಕತ್ವವನ್ನು ಮುಕ್ತಾ ಬೋಬ್ಡೆ ಹೊಂದಿದ್ದು ಅದನ್ನು ಕಾರ್ಯಕ್ರಮಗಳಿಗೆ ಬಾಡಿಗೆಗೆ ನೀಡಲಾಗುತ್ತಿತ್ತು. ಅದರ ಉಸ್ತುವಾರಿಗಾಗಿ 2007ರಿಂದ ತಪಸ್ ಘೋಷ್ನನ್ನು ನೇಮಿಸಲಾಗಿತ್ತು. ಆತನೇ ಹಾಲ್ನ ಬುಕಿಂಗ್ ಮತ್ತು ಇತರ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ. ಮುಖ್ಯ ನ್ಯಾಯಮೂರ್ತಿ ಬೋಬ್ಡೆಅವರ ತಾಯಿಯವರ ವಯಸ್ಸು, ಆರೋಗ್ಯ ಸ್ಥಿತಿ ಗಮನಿಸಿ ಘೋಷ್ ವ್ಯವಹಾರದ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಈತ 2017ರಿಂದ ಇದುವರೆಗೆ ಆತ 2.5 ಕೋಟಿ ರೂ. ವಂಚಿಸಿದ್ದಾನೆಂದು ತಿಳಿದುಬಂದಿದೆ.