ಮಡಿಕೇರಿ: ಕೋವಿಡ್-19 ಲಸಿಕಾ ಕಾರ್ಯಪಡೆಯ ಪೂರ್ವಭಾವಿ ಸಮನ್ವಯ ಸಮಿತಿ ಸಭೆಯು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಜಿಲ್ಲೆಗೆ ಕೋವಿಡ್-19 ಲಸಿಕೆ ಪೂರೈಕೆಯಾದ ಸಂದರ್ಭದಲ್ಲಿ ಲಸಿಕೆ ನೀಡುವ ನಿಟ್ಟಿನಲ್ಲಿ ಇದುವರೆಗಿನ ಮಾರ್ಗಸೂಚಿ ಪ್ರಕಾರ ಕೈಗೊಳ್ಳಲಾಗಿರುವ ಸಿದ್ಧತಾ ಕಾರ್ಯಗಳ ಬಗ್ಗೆ ಮಾಹಿತಿ ಪಡೆದರು.
ಸಭೆಯ ಆರಂಭದಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ಕೋವಿಡ್-19 ಲಸಿಕಾ ಕಾರ್ಯಪಡೆಯ ಮೊದಲ ಸಭೆಯಲ್ಲಿ ತಿಳಿಸಿದಂತೆ ಈಗಾಗಲೇ ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ (ಹೆಲ್ತ್ ಕೇರ್ ವರ್ಕರ್ಸ್) ಪ್ರಥಮ ಹಂತದಲ್ಲಿ ಲಸಿಕೆ ನೀಡುವ ಸಂಬಂಧ ಹೆಸರು ನೋಂದಣಿ ಕಾರ್ಯ ಪೂರ್ಣಗೊಂಡಿದೆ ಎಂದು ಅವರು ಮಾಹಿತಿ ನೀಡಿದರು.
ಸಾಂಕ್ರಾಮಿಕ ರೋಗಶಾಸ್ತ್ರಜ್ಞರಾದ ಡಾ.ಮಹೇಶ್ ಅವರು ಪಿಪಿಟಿ ಮೂಲಕ ಮಾಹಿತಿ ನೀಡಿ, ಕೋವಿಡ್-19 ಲಸಿಕೆ ಸರಬರಾಜು ಆದ ನಂತರ ಜಿಲ್ಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಸರ್ಕಾರಿ 41 ಸಂಸ್ಥೆಗಳ 4,899 ಮತ್ತು ಖಾಸಗಿ 172 ಸಂಸ್ಥೆಗಳ 1,445 ಒಟ್ಟು 213 ಸಂಸ್ಥೆಗಳ 6,344 ಹೆಲ್ತ್ ಕೇರ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಲಸಿಕೆ ನೀಡಲಾಗುತ್ತದೆ. ಈ ಸಂಬಂಧ 248 ಲಸಿಕಾ ಕೇಂದ್ರಗಳು ಮತ್ತು 261 ಲಸಿಕೆ ನೀಡುವವರನ್ನು ಗುರುತಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಕೋವಿಡ್-19 ಲಸಿಕೆಯು 2021 ಆರಂಭದ ವೇಳೆಗೆ ಲಭ್ಯವಾಗಲಿದ್ದು, ಒಬ್ಬ ವ್ಯಕ್ತಿಗೆ 2 ಡೋಸ್ ನೀಡಲಾಗುತ್ತದೆ. ಮೊದಲ ಹಂತದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲರಿಗೂ, ಎರಡನೇ ಹಂತದಲ್ಲಿ ಪೊಲೀಸ್ ಇಲಾಖೆ, ನಗರ ಮತ್ತು ಪಟ್ಟಣ ಸ್ಥಳೀಯ ಸಂಸ್ಥೆಗಳು ಹಾಗೂ ಇನ್ನಿತರೆ ಮುಖ್ಯವಾಹಿನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ, ಮೂರನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಹಾಗೂ 50 ವರ್ಷ ದೊಳಗಿನವರಿಗೆ ಕೊಮೊರ್ಬಿಡಿಟೀಸ್ (comorbidities) ಇದ್ದಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ತಿಳಿಸಿದರು.
ಮುಂದಿನ ದಿನಗಳಲ್ಲಿ ಮುಖ್ಯವಾಹಿನಿಯಲ್ಲಿ ಕೆಲಸ ಮಾಡುವವರಿಗೆ ಲಸಿಕೆ ನೀಡುವ ಸಂದರ್ಭದಲ್ಲಿ ಲಸಿಕಾ ಬೂತ್ಗಳನ್ನು ತೆರೆಯಬೇಕಿದೆ. ಸದ್ಯದ ಮಾರ್ಗಸೂಚಿ ಪ್ರಕಾರ ಲಸಿಕಾ ಬೂತ್ನಲ್ಲಿ ಮೂರು ಕೊಠಡಿ ಗುರುತಿಸಬೇಕಿದೆ. ಜೊತೆಗೆ ಕೋ-ವಿನ್ (Co-Win) ಸಾಪ್ಟ್ವೇರ್ನಲ್ಲಿ ಮಾಹಿತಿಯನ್ನು ದಾಖಲಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ವರದಿ ನೀಡಲಾಗುತ್ತಿದೆ ಎಂದು ಡಾ.ಮಹೇಶ್ ಅವರು ವಿವರಿಸಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ನಗರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ಕರ್ತವ್ಯ ನಿರ್ವಹಿಸುವವರ ಜೊತೆಗೆ ದೊಡ್ಡ ದೊಡ್ಡ ಗ್ರಾ.ಪಂ.ಗಳಲ್ಲಿ ಕರ್ತವ್ಯ ನಿರ್ವಹಿಸುವವರಿಗೂ ಸಹ ಲಸಿಕೆ ನೀಡಬೇಕು ಎಂದರು.
ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ, ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು, ವೈದ್ಯಕೀಯ ಕಾಲೇಜಿನ ಅಧೀಕ್ಷಕರಾದ ಡಾ.ಲೋಕೇಶ್, ಪ್ರಾಂಶುಪಾಲರಾದ ವಿಶಾಲ್ ಕುಮಾರ್, ಡಾ.ಪುರುಷೋತ್ತಮ, ತಾಲ್ಲೂಕು ವೈದ್ಯಾಧಿಕಾರಿಗಳಾದ ಯತಿರಾಜು, ಶ್ರೀನಿವಾಸ್, ಡಿವೈಎಸ್ಪಿ ದಿನೇಶ್ ಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪಿ.ಎಸ್.ಮಚ್ಚಾಡೊ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ರಾಜು, ಪೌರಾಯುಕ್ತರಾದ ಎಸ್.ವಿ.ರಾಮದಾಸ್, ಕಾರ್ಮಿಕ ಇಲಾಖೆ ಅಧಿಕಾರಿ ಯತ್ನಟ್ಟಿ, ರೋಟರಿ ಹಿಲ್ಸ್ನ ಸಂದೀಪ್, ರೆಡ್ಕ್ರಾಸ್ ಸಂಸ್ಥೆಯ ಮುರಳೀದರ, ರೋಟರಿ ಮಿಸ್ಟಿ ಹಿಲ್ ಸಂಸ್ಥೆಯ ಸತೀಶ್ ಸೋಮಣ್ಣ, ಇತರರು ಇದ್ದರು.