ನವದೆಹಲಿ: ಬಾಲಿವುಡ್ ನ “ದ ಡರ್ಟಿ ಪಿಕ್ಚರ್” ಖ್ಯಾತಿಯ ನಟಿ ಆರ್ಯ ಬ್ಯಾನರ್ಜಿ ಅವರು ಡಿಸೆಂಬರ್ 11ರಂದು ದಕ್ಷಿಣ ಕೋಲ್ಕತಾದ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮೂಲತಹ ಬಂಗಾಳಿ ನಟಿ ಆಗಿರುವ ಆರ್ಯ ಸೀತಾರ್ ವಾದಕ ದಿ.ನಿಖಿಲ್ ಬಂಡೋಪಾಧ್ಯಾಯ ಅವರ ಪುತ್ರಿ. 2010ರಲ್ಲಿ ಬಿಡುಗಡೆಯಾದ ಲವ್, ಸೆಕ್ಸ್ ಔರ್ ದೋಕಾ, ದ ಡರ್ಟಿ ಪಿಚ್ಚರ್ ಸೇರಿದಂತೆ ಹಲವು ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸಿದ್ದರು.
ನಟಿ ಆರ್ಯ ಅವರ ಮೂರನೇ ಮಹಡಿಯ ಅಪಾರ್ಟ್ ಮೆಂಟ್ ನಲ್ಲಿ ಈ ಘಟನೆ ನಡೆದಿದ್ದು ಬಾಗಿಲು ಒಡೆದು ಪೊಲೀಸರು ಒಳನುಗ್ಗಿದಾಗ ನಟಿಯ ಶವವನ್ನು ಬೆಡ್ ಮೇಲೆ ಕಂಡಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
33ವರ್ಷದ ನಟಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವಿಧಿವಿಜ್ಞಾನ ತಜ್ಞರು ಸ್ಯಾಂಪಲ್ಸ್ ಅನ್ನು ಸಂಗ್ರಹಿಸಿದ್ದು, ವರದಿ ಬಳಿಕ ತನಿಖೆ ಮುಂದುವರಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರ್ಯ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದರು. ಮನೆಯ ಅಡುಗೆ ಕೆಲಸದ ಮಹಿಳೆ ಬೆಲ್ ಒತ್ತಿದರೂ ಯಾವುದೇ ಪ್ರತಿಕ್ರಿಯೆ ಸಿಗದಿದ್ದಾಗ, ನೆರೆಹೊರೆಯವರನ್ನು ಕರೆದಿದ್ದು ತದನಂತರ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿ ಹೇಳಿದೆ.