ನವದೆಹಲಿ: ಮುಂಬರುವ ದಿನಗಳ ಚುನಾವಣೆಗಳಲ್ಲಿ ಮತದಾರರ ಗುರುತಿನ ಚೀಟಿಯನ್ನು ಡಿಜಿಟಲ್ ಗೆ ರೂಪಾಂತರಗೊಳಿಸುವ ಆಲೋಚನೆಯಲ್ಲಿ ಚುನಾವಣಾ ಆಯೋಗ ಹೊಸ ರೂಪುರೇಷೆಯತ್ತ ಹೆಜ್ಜೆ ಹಾಕುತ್ತಿದೆ.
ಮತದಾರರ ಭಾವಚಿತ್ರವುಳ್ಳ ಚುನಾವಣಾ ಡಿಜಿಟಲ್ ಗುರುತಿನ ಚೀಟಿಯನ್ನು ಸಿದ್ಧಪಡಿಸುವ ಬಗೆಗೆ ಮಾತುಕತೆಗಳು ನಡೆಯುತ್ತಿದ್ದು, ಇನ್ನು ಈ ಸಂಬಂಧವಾಗಿ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ಡಿಜಿಟಲ್ ಗುರುತಿನ ಚೀಟಿಯನ್ನು ಮೊಬೈಲ್, ವೆಬ್ಸೈಟ್, ಇ-ಮೇಲ್ ನಲ್ಲಿ ದೊರೆಯುವಂತೆ ಮಾಡಬೆಕು. ಅದರೊಂದಿಗೆ ಸುಲಭವಾಗಿ ಹಾಗೂ ತ್ವರಿತವಾಗಿ ಗುರುತಿನ ಚೀಟಿಗಳು ಎಲ್ಲರಿಗೂ ಲಭ್ಯವಾಗಬೇಕು ಎಂಬುದು ಆಯೋಗದ ಮೂಲ ಉದ್ದೇಶವಾಗಿದೆ. ಆದರೆ ಈ ತಂತ್ರಜ್ಞಾನವು ದುರುಪಯೋಗವಾಗದಂತೆ ಎಚ್ಚರಿಕೆವಹಿಸಬೇಕಾಗಿದೆ ಆಯೋಗದ ಕರ್ತವ್ಯವೇ ಆಗಿರುವುದರಿಂದ ಇದರ ಬಗ್ಗೆ ಇನ್ನು ಹೆಚ್ಚಿನ ಆಲೋಚನೆ ಮತ್ತು ಯೋಜನೆಗಳನ್ನು ಮಾಡಬೇಕು ಎಂದು ಅಧಿಕಾರಿಗಳು ತಿಳಿಸಿದರು.
ಇವಷ್ಟೇ ಅಲ್ಲದೆ ಡಿಜಿಟಲ್ ಗುರುತಿನ ಚೀಟಿಗಳ ಬಗ್ಗೆ ಸಾರ್ವಜನಿಕರು, ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಲಹೆಯನ್ನು ಪಡೆಯುವುದು ಅಗತ್ಯವಾಗಿದೆ. ಯೋಜನೆಯನ್ನು ಯಾವ ರೀತಿ ಜಾರಿಗೊಳಿಸಬೇಕು ಎಂಬುದರ ಬಗ್ಗೆ ಸಮಯೋಚಿತ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.