ನವದೆಹಲಿ: ಹೊಸದಾಗಿ ಜಾರಿಗೆ ಬಂದ ಮೂರು ಕೃಷಿ ಕಾನೂನುಗಳ ವಿರುದ್ಧ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸುವ ಸಲುವಾಗಿ ಸಿಖ್-ಅಮೆರಿಕನ್ ಯುವಕರು ಆಯೋಜಿಸಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ವಾಷಿಂಗ್ಟನ್ ನಲ್ಲಿರುವ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಯನ್ನು ವಿರೂಪಗೊಳಿಸಲಾಗಿದೆ.
ಈ ಪ್ರತಿಭಟನೆಯಲ್ಲಿ ಯುವಕರು ‘ಖಲಿಸ್ತಾನ್’ ಧ್ವಜಗಳನ್ನು ಹಾರಿಸಿದ್ದು, ಗಾಂಧಿಯ ಪ್ರತಿಮೆಯ ಮೇಲೆ ಹಳದಿ ಬಣ್ಣದ ಧ್ವಜವನ್ನು ಹಾಗೂ ಕಟೌಟ್ಗಳನ್ನ ಅಂಟಿಸಲಾಗಿದೆ.
ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ಕಛೇರಿಯ ಈ ಬಗ್ಗೆ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದು ಈ ತುಂಟಾಟಗಳನ್ನು ಖಂಡಿಸಿದ್ದು, ಈ ಘಟನೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಇಲಾಖೆಗೆ ಒತ್ತಾಯಿಸಿದೆ.
ಹೊಸ ಕೃಷಿ ಕಾನೂನುಗಳ ವಿರುದ್ಧ ಶನಿವಾರ, ಗ್ರೇಟರ್ ವಾಷಿಂಗ್ಟನ್ ಡಿಸಿ ಮತ್ತು ಸುತ್ತಮುತ್ತಲಿನ ಮೇರಿಲ್ಯಾಂಡ್, ವರ್ಜೀನಿಯಾ, ನ್ಯೂಯಾರ್ಕ್, ನ್ಯೂಜೆರ್ಸಿ, ಪೆನ್ಸಿಲ್ವೇನಿಯಾ, ಇಂಡಿಯಾನಾ, ಓಹಿಯೋ ಮತ್ತು ಉತ್ತರ ಕೆರೊಲಿನಾದಲ್ಲಿ ಪ್ರತಿಭಟನೆಯನ್ನು ನೋಂದಾಯಿಸಲು ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಕಾರ್ ರ್ಯಾಲಿಯನ್ನು ನಡೆಸಿದರು. ಜೊತೆಗೆ ಭಾರತ ವಿರೋಧಿ ಘೋಷಣೆಗಳನ್ನು ಕೂಗಿದರು.
ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಸಾವಿರಾರು ರೈತರು ಎರಡು ವಾರಗಳಿಂದ ದೆಹಲಿಯ ವಿವಿಧ ಗಡಿ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.