ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸುದ್ದಿ ಮಾಡುತ್ತಿರುವ ನಟ ರಜನಿಕಾಂತ್ ರಾಜಕೀಯ ಪದಾರ್ಪಣೆಗೆ ಹೊಸದೊಂದು ಆಯಾಮ ಸಿಕ್ಕಿದೆ. ನೂತನ ಪಕ್ಷದ ಮೂಲಕ ನಟ ರಜನಿಕಾಂತ್ ತಮಿಳುನಾಡಿನಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಈಗ ಆ ಪಕ್ಷದ ಹೆಸರು ಹಾಗೂ ಚಿಹ್ನೆ ಬಹಿರಂಗವಾಗಿರುವುದಾಗಿ ತಿಳಿಸಿದೆ.
ನೂತನ ಪಕ್ಷದ ನೊಂದಾವಣೆಯ ನಂತರ ಪಕ್ಷದ ಚಿಹ್ನೆ ಹಾಗೂ ಹೆಸರು ಹೊರಬಂದಿದ್ದು, “ಮಕ್ಕಳ್ ಸೆವಾಯ್ ಕಚ್ಚಿ”(ಜನ ಸೇವೆ ಪಕ್ಷ) ಎಂದಿದ್ದು, ಆಟೋ ರಿಕ್ಷಾ ಪಕ್ಷದ ಚಿಹ್ನೆಯಾಗಿದೆ. ಇದರಿಂದ ಹಲವಾರು ಊಹಾಪೋಹಗಳಿಗೆ ಮುಕ್ತಿ ದೊರಕಿದಂತಾಗಿದೆ.
ಪಕ್ಷದ ಚಿಹ್ನೆಗೆ ಸಂಬಂಧಿಸಿದಂತೆ ಎರಡು ಆಯ್ಕೆಗಳನ್ನು ಇಟ್ಟಿದ್ದು ಅದರಲ್ಲಿ ಒಂದು ರಜನಿಕಾಂತ್ ಅವರು ಬಾಬಾ ಸಿನಿಮಾದಲ್ಲಿ ರಜನಿಕಾಂತ್ ಉಪಯೋಗಿಸಿದ ರೀತಿ ಎರಡು ಬೆರಳಿನ ಚಿಹ್ನೆ ಆಗಿದ್ದು, ಎರಡನೆಯ ಆದ್ಯತೆ ಆಟೋರಿಕ್ಷಾ ಚಿಹ್ನೆಗೆ ನೀಡಲಾಗಿತ್ತು ಎಂದು ವರದಿಗಳು ತಿಳಿಸಿವೆ.
ನೂತನ ಪಕ್ಷದ ಸ್ಥಾಪನೆ ಹಾಗೂ ಉದ್ಘಾಟನೆಯ ಬಗ್ಗೆ ಅಧಿಕೃತವಾಗಿ ರಜನಿಕಾಂತ್ ಅವರು ಘೋಷಿಸುವವರೆಗೂ ಜನರು ಕಾಯಬೇಕು ಎಂದು ನೂತನ ಪಕ್ಷದ ಸದಸ್ಯರು ಕೋರಿಕೊಂಡಿದ್ದಾರೆ.