ಸ್ಯಾನ್ ಫ್ರಾನ್ಸಿಸ್ಕೊ: ಸರ್ಚ್ ಎಂಜಿನ್ ದೈತ್ಯ ಎಂದೇ ಗುರುತಿಸಿಕೊಂಡಿರುವ ಗೂಗಲ್ ಕ್ಲೌಡ್ ಹೋಸ್ಟಿಂಗ್ ತೊಂದರೆ ಇಂದ ಮಂಗಳವಾರ ಮತ್ತೆ ಕೈ ಕೊಟ್ಟು ಗ್ರಾಹಕರಿಗೆ ತೊಂದರೆಯನ್ನು ಉಂಟುಮಾಡಿತ್ತು.
ಒಂದು ದಿನದ ಹಿಂದಷ್ಟೇ ಅಂದರೆ ಸೋಮವಾರ ಕೂಡಾ ಗೂಗಲ್ ಸೇವೆಯಲ್ಲಿ ವ್ಯತ್ಯಾಸ ಉಂಟಾಗಿತ್ತು.
ಈ ಬಗ್ಗೆ ಬಳಕೆದಾರರು ಗೂಗಲ್ಗೆ ದೂರು ಸಲ್ಲಿಸಿದ್ದರು. ಮಂಗಳವಾರ ರಾತ್ರಿ ಗೂಗಲ್ ಜಿ-ಮೇಲ್ ಸೇವೆಗೆ ಅಡಚಣೆಯಾಗಿದ್ದು, ಸುಮಾರು ಎರಡೂವರೆ ಗಂಟೆಗಳಷ್ಟು ಸಮಯ ಗ್ರಾಹಕರು ಪರದಾಡುವಂತಾಯಿತು.
ಈ ಸಂಬಂಧ ಗೂಗಲ್ ಕ್ಷಮೆ ಯಾಚಿಸಿದ್ದು, ನಿಮ್ಮ ತಾಳ್ಮೆ ಹಾಗೂ ನಿರಂತರ ಬೆಂಬಲಕ್ಕೆ ಧನ್ಯವಾದಗಳು ಎಂದು ಗೂಗಲ್ ಸ್ಟೇಟಸ್ ಡ್ಯಾಶ್ಬೋರ್ಡ್ ನಲ್ಲಿ ತಿಳಿಸಿದೆ.
ನಮ್ಮ ಸಿಸ್ಟಂಗಳನ್ನು ಉತ್ತಮಗೊಳಿಸಲು ನಿರಂತರ ಸುಧಾರಣೆಗಳನ್ನು ಮಾಡಲಾಗುತ್ತಿದೆ ಎಂದು ಗೂಗಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಎಷ್ಟು ಬಳಕೆದಾರರಿಗೆ ತೊಂದರೆ ಎದುರಾಗಿದೆ ಎಂಬುದರ ಬಗ್ಗೆ ವಿವರವನ್ನು ಗೂಗಲ್ ಬಹಿರಂಗಪಡಿಸಿಲ್ಲ. ಹಾಗೆಯೇ ಅಡಚಣೆಯ ಹಿಂದಿನ ನಿಖರ ಕಾರಣವನ್ನು ಕೂಡಾ ಬಹಿರಂಗ ಪಡಿಸಿಲ್ಲ.