ಜಿನೀವಾ: ಬ್ರಿಟನ್ನಲ್ಲಿ ಪ್ರಾರಂಭವಾಗಿರುವ ಹೊಸ ಕೊರೋನಾ ವೈರಸ್ ಅಲೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಎಚ್ಚರಿಕೆ ನೀಡಿದ್ದು ಜನರು ಭಯ ಭೀತಿಗೊಳ್ಳುವ ಅಗತ್ಯವಿಲ್ಲ, ಇದು ಸಾಂಕ್ರಾಮಿಕ ರೋಗ ವಿಕಸನದ ಸಹಜ ಭಾಗವಾಗಿದೆ ಎಂದು ಹೇಳಿದೆ.
ಬ್ರಿಟನ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಈ ಕೊರೊನಾ ವೈರಸ್ ಹೊಸ ಅಲೆ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಯುರೋಪ್ ರಾಷ್ಟ್ರದ ಹಲವು ರಾಷ್ಟ್ರಗಳು ಸಂಚಾರದ ಮೇಲೆ ನಿರ್ಬಂಧವನ್ನು ಹೇರಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಮೈಕ್ ರಯಾನ್, ನಾವು ಸಮತೋಲನವನ್ನು ಕಾಪಾಡಬೇಕು. ಪಾರದರ್ಶಕತೆ ಬಹಳ ಮುಖ್ಯ. ಸಾರ್ವಜನಿಕರಿಗೆ ಮಾಹಿತಿ ನೀಡುವುದು ಅತ್ಯಗತ್ಯ. ಆದರೆ ಇದು ವೈರಸ್ ವಿಕಾಸದ ಸಾಮಾನ್ಯ ಭಾಗವಾಗಿದೆ ಎಂದು ತಿಳಿದುಕೊಳ್ಳುವುದು ಮುಖ್ಯ ಎಂದಿದ್ದಾರೆ.