ವಾಷಿಂಗ್ಟನ್: ಮಸೂದೆಯಲ್ಲಿನ ಕೆಲವು ಅಂಶಗಳು ರಾಷ್ಟ್ರದ ಭದ್ರತೆಗೆ ಅಪಾಯವೊಡ್ಡಲಿವೆ ಎಂಬ ಕಾರಣ ನೀಡಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಾರ್ಷಿಕ ರಕ್ಷಣಾ ಮಸೂದೆಯನ್ನು ತಿರಸ್ಕರಿಸಿದ್ದಾರೆ.
ಟ್ರಂಪ್ ಅವರ ಈ ವಿರೋಧವನ್ನು ಗಣನೆಗೆ ತೆಗೆದುಕೊಳ್ಳದೆ ಮಸೂದೆಗೆ ಅನುಮೋದನೆ ನೀಡಲು ಸಂಸತ್ನ ಉಭಯ ಸದನಗಳು ಮುಂದಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.
₹ 54.53 ಲಕ್ಷ ಕೋಟಿ ಗಾತ್ರದ ನ್ಯಾಷನಲ್ ಡಿಫೆನ್ಸ್ ಆಥರೈಜೇಶನ್ ಆ್ಯಕ್ಟ್ಗೆ ಇದಾಗಿದ್ದು ಸಂಸತ್ನ ಕೆಳಮನೆ 335–78 ಮತಗಳಿಂದ ಅನುಮೋದನೆ ನೀಡಿತ್ತು. ಮೇಲ್ಮನೆಯಾದ ಸೆನೆಟ್ ಈ ಮಸೂದೆಯನ್ನು 84–13 ಮತಗಳಿಂದ ಅನುಮೋದಿಸಿತ್ತು.
ಕೆಳಮನೆಯ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು, ‘ಟ್ರಂಪ್ ಕೈಗೊಂಡಿರುವುದು ಅತ್ಯಂತ ದುಡುಕಿನ ನಿರ್ಧಾರ’ ಎಂದು ಆರೋಪ ಮಾಡಿದ್ದಾರೆ. ಡಿ.28ರಂದು ಅಧಿವೇಶನ ನಡೆಯಲಿದ್ದು, ಪಕ್ಷಭೇದ ಮರೆತು ಈ ಮಸೂದೆಯನ್ನು ಅಂಗೀಕರಿಸಲಾಗುವುದು’ ಎಂದು ಪೆಲೋಸಿ ಸ್ಪಷ್ಟಪಡಿಸಿದ್ದಾರೆ.