ಮಧ್ಯಪ್ರದೇಶ: ಲವ್ ಜಿಹಾದಿಗೆ ನಿಷೇಧ ಹೇರುವ ಧಾರ್ಮಿಕ ಸ್ವಾತಂತ್ರ್ಯ ಮಸೂದೆ 2020ಕ್ಕೆ ಮಧ್ಯಪ್ರದೇಶದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಕಾಯ್ದೆಯ ಸೆಕ್ಷನ್ ಮೂರರ ಪ್ರಕಾರ ಧಾರ್ಮಿಕ ಮತಾಂತರಕ್ಕೆ ಬಲವಂತದಿಂದ ಯತ್ನಿಸಿದ್ದಾರೆ ಒಂದರಿಂದ ಐದು ವರ್ಷದವರೆಗೆ ಜೈಲು ಮತ್ತು 25 ಸಾವಿರ ದಂಡ ವಿಧಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.
ಒಂದು ವೇಳೆ ಧರ್ಮವನ್ನು ಮುಚ್ಚಿಟ್ಟು ಮೋಸ ಮಾಡಲು ಪ್ರಯತ್ನಿಸಿದ್ದಾರೆ ಮೂರರಿಂದ ಹತ್ತು ವರ್ಷಗಳ ಜೈಲುವಾಸ ಹಾಗೂ ಕನಿಷ್ಠ 50 ಸಾವಿರ ದಂಡ ವಿಧಿಸಲಾಗುವುದು ಎಂದು ಮಸೂದೆ ತಿಳಿಸುತ್ತದೆ. ಇಷ್ಟೇ ಅಲ್ಲದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಪ್ರಾಪ್ತ ಅಥವಾ ಮಹಿಳೆಯರನ್ನು ಬಲವಂತವಾಗಿ ಮತಾಂತರಿಸಲು ಯತ್ನಿಸಿದ್ದೇ ಆದಲ್ಲಿ ಆ ಮಹಿಳೆಗೆ ಸಂಬಂಧಪಟ್ಟ ರಕ್ತಸಂಬಂಧಿಗಳು ದೂರು ಸಲ್ಲಿಸಬಹುದು. ಅದರ ಮೂಲಕ ಆರೋಪಿಗೆ ಎರಡರಿಂದ ಹತ್ತು ವರ್ಷಗಳ ಕಾಲ ಜೈಲು ಸೇರುವಂತೆ ಹಾಗೂ 50 ಸಾವಿರ ದಂಡ ಕಟ್ಟುವಂತೆ ಮಾಡಬಹುದು.
ಇದರೊಂದಿಗೆ ಒಂದು ವೇಳೆ ಇಬ್ಬರು ಅಥವಾ ಹೆಚ್ಚಿನ ಮಂದಿ ಸೇರಿ ಸಾಮೂಹಿಕಯಾಗಿ ಮತಾಂತರಕ್ಕೆ ಯತ್ನಿಸಿದರೆ, 5ರಿಂದ 10 ವರ್ಷದ ಶಿಕ್ಷೆ ಹಾಗೂ ಕನಿಷ್ಠ 1 ಲಕ್ಷ ದಂಡ ವಿಧಿಸಲಾಗುವುದು ಎಂದು ಸಚಿವಾಲಯ ಆದೇಶ ಹೊರಡಿಸಿದೆ.