ಲಖನೌ: ಮಹಿಳೆ ಗ್ರಾಮ ಪಂಚಾಯಿತಿಗೆ ಆಯ್ಕೆಯಾಗಿ ಐದು ವರ್ಷಗಳ ನಂತರ ಬಯಲಾದ ಆಕೆಯ ಸತ್ಯ. ಮೂಲತಹ ಪಾಕಿಸ್ತಾನದ ಮಹಿಳೆ ಆಗಿದ್ದರೂ ವಿಸ ಪಡೆದು ಭಾರತಕ್ಕೆ ಬಂದು ಭಾರತೀಯ ಗ್ರಾಮ ಪಂಚಾಯಿತಿಯಲ್ಲಿ ಚಿಕಿತ್ಸೆಯಾಗಿ ಆಯ್ಕೆಯಾಗಿದ್ದ ಘಟನೆ ಉತ್ತರ ಪ್ರದೇಶದ ಒಂದು ಗ್ರಾಮದಲ್ಲಿ ನಡೆದಿದೆ.
35 ವರ್ಷದ ಬಾನೋ ಬೇಗಂ ಎಂಬ ಹೆಸರಿನ ಮಹಿಳೆ ಹಿಂದೆ ಸಂಬಂಧಿಯೊಬ್ಬರ ಮದುವೆಗೆಂದು ಪಾಕಿಸ್ತಾನದಿಂದ ಉತ್ತರ ಪ್ರದೇಶದ ಇಟಾಕ್ಕೆ ಬಂದಿದ್ದರು. ಇಲ್ಲಿಗೆ ಬಂದ ಕೆಲವೇ ದಿನಗಳಲ್ಲಿ ಆಕೆ ಇಲ್ಲಿನ ಅಖ್ತರ್ ಅಲಿ ಹೆಸರಿನ ವ್ಯಕ್ತಿಯನ್ನು ಮದುವೆಯಾಗಿದ್ದರು. ಮದುವೆಯಾದ ಕಾರಣ ಆಕೆಯ ವೀಸಾ ಅವಧಿಯನ್ನು ವಿಸ್ತರಿಸಲಾಗಿತ್ತು. ಆದರೆ ಅದನ್ನೇ ದುರುಪಯೋಗ ಪಡಿಸಿಕೊಂಡ ಮಹಿಳೆ ಇಲ್ಲಿನ ಗ್ರಾಮ ಪಂಚಾಯಿತಿ ಚುನಾವಣೆಗೆ ನಿಂತು, ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಆ ಪಂಚಾಯಿತಿಯ ಅಧ್ಯಕ್ಷೆ ಶಹನಾಜ್ ಬೇಗಂ ಮೃತಪಟ್ಟ ನಂತರ, ಬಾನೋ ಬೇಗಂನನ್ನು ಅಧ್ಯಕ್ಷರಾಗಿ ನೇಮಿಸಲು ಶಿಫಾರಸು ಮಾಡಲಾಗಿದೆ. ಆದರೆ ಈ ವಿಚಾರವಾಗಿ ಅನೇಕ ಸದಸ್ಯರು ಪ್ರಶ್ನೆ ಎತ್ತಿದ್ದು, ನಂತರ ಆಕೆಯ ನಿಜ ಬಣ್ಣ ಹೊರಬಿದ್ದಿದೆ.
ಐದು ವರ್ಷಗಳ ಹಿಂದೆ ಪಂಚಾಯಿತಿ ಚುನಾವಣೆಗೆ ನಿಲ್ಲುವ ಸಲುವಾಗಿ ಮಹಿಳೆ ಅಕ್ರಮವಾಗಿ ಹಣ ಕೊಟ್ಟು ಆಧಾರ್ ಕಾರ್ಡ್ ಮತ್ತು ಗುರುತಿನ ಚೀಟಿ ಮಾಡಿಸಿಕೊಂಡಿದ್ದಾರೆ. ಅದನ್ನೇ ಬಳಸಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಎನ್ನುವುದು ವಿಚಾರಣೆ ವೇಳೆ ತಿಳಿದುಬಂದಿದೆ. ಇದೀಗ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಮಹಿಳೆಯ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.