ನವದೆಹಲಿ: ಎಲ್ಲೆಡೆ ಸುದ್ದಿ ಮಾಡುತ್ತಿರುವ ಕೊರೋನ ಲಸಿಕೆ ವಿಚಾರವಾಗಿ ಶನಿವಾರ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ದೆಹಲಿ ಮಾತ್ರವಲ್ಲ ದೇಶಾದ್ಯಂತ ಕೋವಿಡ್ 19 ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ದರಿಯಾಗಂಜ್ ನ ಹೆರಿಗೆ ಮತ್ತು ಮಕ್ಕಳ ಕಲ್ಯಾಣ ಕೇಂದ್ರದಲ್ಲಿ ಕೋವಿಡ್ 19 ಡ್ರೈ ರನ್ ಕುರಿತು ಪರಿಶೀಲನೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವ ಈ ಹೇಳಿಕೆಯನ್ನು ನೀಡಿದರು.
ಈಗಾಗಲೇ ಘೋಷಿಸಿರುವಂತೆ ದೆಹಲಿಯಲ್ಲಿ ಉಚಿತ ನೀಡುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ, ದೆಹಲಿ ಮಾತ್ರವಲ್ಲ ಇಡೀ ದೇಶದಲ್ಲಿ ಉಚಿತವಾಗಿ ಲಸಿಕೆಯನ್ನು ನೀಡಲಾಗುವುದು ಎಂದು ಹೇಳಿದರು. ಅಷ್ಟೇ ಅಲ್ಲದೆ
ದೇಶಾದ್ಯಂತ ಮೊದಲ ಹಂತದಲ್ಲಿ ಆದ್ಯತೆಯ ಮೇರೆಗೆ ಒಂದು ಕೋಟಿ ಹೆಲ್ತ್ ಕೇರ್ ಹಾಗೂ 2 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ 19 ಲಸಿಕೆಯನ್ನು ನೀಡಲಾಗುವುದು ಎಂದು ತಿಳಿಸಿದರು.
ಒಟ್ಟು 27 ಕೋಟಿ ಮಂದಿ ಲಸಿಕೆ ಪಡೆಯಲಿದ್ದು, ಜುಲೈ ತಿಂಗಳವರೆಗೆ ಈ ಲಸಿಕೆ ಕಾರ್ಯ ಚಟುವಟಿಕೆಗಳು ಮುಂದುವರೆದಿದೆ ಎಂದು ಹೇಳಿದರು.