ನವದೆಹಲಿ: ಧೂಮಪಾನ ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ಹೊಸ ಮಸೂದೆಯನ್ನು ಸಿದ್ಧಪಡಿಸುತ್ತಿದೆ. ಇದು ಇಂದಿನ ಯುವ ಧೂಮಪಾನಿಗಳನ್ನು ಗುರಿಯಾಗಿಸಿಕೊಂಡುಸಿದ್ಧಪಡಿಸುತ್ತಿರುವ ಬಿಲ್ ಎಂದು ಹೇಳಲಾಗುತ್ತದೆ.
ಇತ್ತೀಚೆಗೆ ದೇಶಾದ್ಯಂತ ಮೂರು ಕೃಷಿ ಮಸೂದೆಗಳನ್ನು ಕಾಯ್ದೆಗಳನ್ನಾಗಿಸಿ ಸಂಚಲನ ಮೂಡಿಸಿರುವ ಕೇಂದ್ರ ಸರ್ಕಾರ, ಇದೀಗ ಧೂಮಪಾನಿಗಳತ್ತ ತಿರುಗಿದ್ದು, ಅದರ ಸಲುವಾಗಿ ಹೊಸ ಮಸೂದೆಯೊಂದನ್ನು ಸಿದ್ಧಪಡಿಸಿದೆ. ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳು ತಿದ್ದುಪಡಿ ಕಾಯ್ದೆ, 2020ರ ಮೂಲಕ ಈ ಕ್ರಮಕ್ಕೆ ಮುಂದಡಿ ಇಟ್ಟಿದೆ.
ಈ ಹೊಸ ತಿದ್ದುಪಡಿಯಲ್ಲಿ ಜಾಹೀರಾತು ತಡೆ ಮತ್ತು ವ್ಯಾಪಾರ, ವಾಣಿಜ್ಯ, ಉತ್ಪಾದನೆ, ಸರಬರಾಜು ಹಾಗೂ ವಿತರಣೆ ನಿಯಂತ್ರಣಗಳ ಇದಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಸುದ್ದಿಗಳು ಹೇಳುತ್ತಿವೆ.
ಹೊಸ ತಿದ್ದುಪಡಿ ಪ್ರಕಾರ ಸಿಗರೇಟ್ ಸೇವನೆ/ಮಾರಾಟ ಸಂಬಂಧ ಇರುವ ವಯಸ್ಸಿನ ಮಿತಿ ಹೆಚ್ಚಾಗಲಿದೆ. ಅಂದರೆ ಈ ಹಿಂದೆ 18 ವರ್ಷದ ಒಳಗಿನವರಿಗೆ ಸಿಗರೇಟ್ ಮಾರಾಟ ಮಾಡುವುದು ಅಥವಾ ಅವರು ಧೂಮಪಾನ ಮಾಡುವುದಕ್ಕೆ ನಿರ್ಬಂಧವಿತ್ತು. ಈ ತಿದ್ದುಪಡಿ ಪ್ರಕಾರ ಅದು 21 ವರ್ಷಕ್ಕೆ ಹೆಚ್ಚಳವಾಗಲಿದ್ದು, ಮುಂದೆ 21 ವರ್ಷದ ಒಳಗಿನವರಿಗೆ ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಅಥವಾ ಆ ವಯಸ್ಸಿನ ಒಳಗಿನವರು ಅದನ್ನು ಸೇವಿಸುವುದು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗುವುದು.
ಈ ನಿಯಮಗಳನ್ನು ಉಲ್ಲಂಘಿಸಿದಲ್ಲಿ 2 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ವರೆಗೆ ದಂಡ ವಿಧಿಸಬಹುದಾಗಿದೆ. ಎರಡನೇ ಸಲ ಉಲ್ಲಂಘಿಸಿದರೆ ಐದು ವರ್ಷ ಜೈಲು ಶಿಕ್ಷೆ ಹಾಗೂ 5 ಲಕ್ಷ ರೂ. ವರೆಗೆ ದಂಡ ವಿಧಿಸಲಾಗುವುದು. ಅದರೊಂದಿಗೆ ನಿರ್ಬಂಧಿತ ಪ್ರದೇಶದಲ್ಲಿ ಧೂಮಪಾನ ಮಾಡಿದರೆ 2,000 ರೂ ದಂಡ ಹಾಕಲಾಗುವುದು ಎಂದು ಮಸೂದೆಯಲ್ಲಿ ತಿಳಿಸಲಾಗಿದೆ ಎಂದು ವರದಿಗಳು ಹೇಳಿವೆ.