ನವದೆಹಲಿ: ಇದುವರೆಗೆ ದೇಶದ ಏಳು ರಾಜ್ಯಗಳಾದ ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ, ಗುಜರಾತ್ ಮತ್ತು ಉತ್ತರ ಪ್ರದೇಶಗಳಲ್ಲಿ ಪಕ್ಷಿ ಜ್ವರ ದೃಢಪಟ್ಟಿದೆ. ಆದರೆ ಛತ್ತಿಸ್ಗಢ್, ಮಹಾರಾಷ್ಟ್ರ ಮತ್ತು ದೆಹಲಿಯಿಂದ ಹಕ್ಕಿಗಳ ಅಸಾಮಾನ್ಯ ಸಾವಿನ ಪರೀಕ್ಷಾ ವರದಿಗಳಿಗಾಗಿ ಕಾಯಲಾಗುತ್ತಿದೆ ಎಂದು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ಶನಿವಾರ ತಿಳಿಸಿದೆ.
ಸಚಿವಾಲಯ ಹೊರಡಿಸಿದ ಹೇಳಿಕೆಯ ಪ್ರಕಾರ, ಹರಿಯಾಣದ ಪಂಚಕುಲ ಜಿಲ್ಲೆಯ ಎರಡು ಕೋಳಿ ಸಾಕಾಣಿಕೆ ಕೇಂದ್ರಗಳಿಂದ ಐಸಿಎಆರ್-ನಿಹ್ಸಾಡ್ ಏವಿಯನ್ ಇನ್ಫ್ಲುಯೆನ್ಸ (ಎಐ) ಸಕಾರಾತ್ಮಕ ಮಾದರಿಗಳನ್ನು ದೃಢ ಪಡಿಸಿದ ನಂತರ, ವಲಸೆ ಹಕ್ಕಿಗಳಲ್ಲಿ ಹಕ್ಕಿ ಜ್ವರಕ್ಕೆ ಧನಾತ್ಮಕ ಪ್ರಕರಣಗಳು ವರದಿಯಾಗಿದೆ. ಮಧ್ಯಪ್ರದೇಶದ ಅಗರ್ ಮತ್ತು ವಿದಿಶಾ ಜಿಲ್ಲೆ, ಕಾನ್ಪುರದ ಪ್ರಾಣಿಶಾಸ್ತ್ರ ಉದ್ಯಾನ ಮತ್ತು ರಾಜಸ್ಥಾನದ ಪ್ರತಾಪ್ಗರ್ ಮತ್ತು ದೌಸಾ ಜಿಲ್ಲೆಗಳಲ್ಲಿ ಹಕ್ಕಿಜ್ವರದ ಶಂಕೆ ಮೂಡಿದೆ.
ರೋಗ ಹರಡುವುದನ್ನು ತಪ್ಪಿಸಲು ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ (ಡಿಎಹೆಚ್ ಮತ್ತು ಡಿ), ಹಕ್ಕಿಜ್ವರ ಪೀಡಿತ ರಾಜ್ಯಗಳಿಗೆ ಸಲಹೆಯನ್ನು ನೀಡಿದೆ. ಅಷ್ಟೇ ಅಲ್ಲದೆ, ತುರ್ತು ಪರಿಸ್ಥಿತಿಗಾಗಿ ರಾಜ್ಯಗಳು ಆರ್ಆರ್ಟಿ ತಂಡಗಳನ್ನು ರಚಿಸಿದೆ ಮತ್ತು ಪರೀಕ್ಷೆಗೆ ಮಾದರಿಗಳನ್ನು ಗೊತ್ತುಪಡಿಸಿದ ಪ್ರಯೋಗಾಲಯಕ್ಕೆ ಕಳುಹಿಸಿದೆ.