News Kannada
Tuesday, December 06 2022

ದೇಶ-ವಿದೇಶ

ಎನ್​ಎಸ್​ಸಿ, ಕೆವಿಪಿ, ಪೋಸ್ಟ್​​ ಆಫೀಸ್​ ಎಫ್​ಡಿ ಬಡ್ಡಿದರಗಳ ಕಡಿತ: 46 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದ ಪಿಪಿಎಫ್ ಬಡ್ಡಿ ದರ

Photo Credit :

ಎನ್​ಎಸ್​ಸಿ, ಕೆವಿಪಿ, ಪೋಸ್ಟ್​​ ಆಫೀಸ್​ ಎಫ್​ಡಿ ಬಡ್ಡಿದರಗಳ ಕಡಿತ: 46 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದ ಪಿಪಿಎಫ್ ಬಡ್ಡಿ ದರ

ದೆಹಲಿ: ದೇಶದ ಕೋಟ್ಯಂತರ ಬಡವರು ಮತ್ತು ಮಧ್ಯಮ ವರ್ಗದವರು ಸಣ್ಣ ಉಳಿತಾಯಕ್ಕೆ ನೆಚ್ಚಿಕೊಂಡಿರುವ ಅಂಚೆ ಕಚೇರಿಯ ಹಲವು ಜನಪ್ರಿಯ ಯೋಜನೆಗಳ ಬಡ್ಡಿದರಗಳನ್ನು ಕೇಂದ್ರ ಸರ್ಕಾರ ಗಮನಾರ್ಹ ಪ್ರಮಾಣದಲ್ಲಿ ಕಡಿಮೆ ಮಾಡಿದೆ. ಜನರು ದೀರ್ಘಾವಧಿಯ ನಿಯಮಿತ ಹೂಡಿಕೆ ಮತ್ತು ಉಳಿತಾಯಕ್ಕೆ ನೆಚ್ಚಿಕೊಂಡಿರುವ ಸಾರ್ವಜನಿಕ ಭವಿಷ್ಯ ನಿಧಿಯ ಬಡ್ಡಿ ದರವನ್ನು 46 ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿಸಲಾಗಿದೆ. ಕಳೆದ 46 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪಿಪಿಎಫ್ ಬಡ್ಡಿದರ ಶೇ 7ಕ್ಕಿಂತ ಕಡಿಮೆಯಾಗಿದೆ ಎಂಬುದು ಗಮನಾರ್ಹ.

ಸಣ್ಣ ಉಳಿತಾಯ ಯೋಜನೆಗಳಲ್ಲಿ ನಿಯಮಿತವಾಗಿ ಹಣ ತೊಡಗಿಸುವವರಿಗೆ ಇದೊಂದು ಕೆಟ್ಟ ಸುದ್ದಿ ಆಗಿದೆ. ಇಂದಿನಿಂದ (ಏಪ್ರಿಲ್ 1, 2021) ರಿಂದ ಜೂನ್ 30, 2021ರವರೆಗೆ ಅನ್ವಯವಾಗುವಂತೆ ಕೇಂದ್ರ ಸರ್ಕಾರವು ಬುಧವಾರ ಬಡ್ಡಿದರಗಳನ್ನು ಘೋಷಿಸಿದೆ. ಪಿಪಿಎಫ್​ ಬಡ್ಡಿದರವನ್ನು ಶೇ 7.1ರಿಂದ ಶೇ 6.4ಕ್ಕೆ ಇಳಿಸಲಾಗಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಬಡ್ಡಿದರವನ್ನು ಶೇ 7.4ರಿಂದ ಶೇ 6.5ಕ್ಕೆ ಇಳಿಸಲಾಗಿದೆ.

ಅಂಚೆ ಇಲಾಖೆಯ ಜನಪ್ರಿಯ ಮಾಸಿಕ ಆದಾಯ ಯೋಜನೆಯ (Monthly Income Scheme – MIS) ಬಡ್ಡಿದರವನ್ನು ಶೇ 6.6ರಿಂದ ಶೇ 5.7ಕ್ಕೆ ಇಳಿಸಲಾಗಿದೆ. ಈ ಯೋಜನೆಯಡಿ ಬಡ್ಡಿಯನ್ನು ಪ್ರತಿತಿಂಗಳು ಪಾವತಿಸಲಾಗುತ್ತದೆ. ಹೀಗಾಗಿಯೇ ನಿವೃತ್ತ ಉದ್ಯೋಗಿಗಳು, ಹಿರಿಯ ನಾಗರಿಕರು ಈ ಯೋಜನೆಯಲ್ಲಿ ಹಣವನ್ನು ಇರಿಸಿ, ಪಿಂಚಣಿಯ ರೀತಿಯಲ್ಲಿ ಬಡ್ಡಿಯನ್ನು ಪ್ರತಿ ತಿಂಗಳು ಪಡೆದುಕೊಳ್ಳುತ್ತಾರೆ. ಈಗ ಬಡ್ಡಿ ಕಡಿಮೆಯಾಗಿರುವುದರಿಂದ ಈ ಯೋಜನೆಯಡಿ ಸಿಗುವ ಮಾಸಿಕ ಹಣವೂ ಕಡಿಮೆಯಾಗುತ್ತದೆ.

ಒಂದು ವರ್ಷದ ಅವಧಿ ಠೇವಣಿಗೆ (Time Deposit) ಶೇ 4.4 ಮತ್ತು 5 ವರ್ಷದ ಅವಧಿ ಠೇವಣಿಗೆ ಶೇ 5.8ರ ಬಡ್ಡಿದರಗಳನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಒಂದು ವರ್ಷದ ಅವಧಿ ಠೇವಣಿಗೆ ಈ ಹಿಂದೆ ಶೇ 5.5ರ ಬಡ್ಡಿ ನೀಡಲಾಗುತ್ತಿತ್ತು. ಈಗ ಇದು ಕೇವಲ ಶೇ 4.4ಕ್ಕೆ ಇಳಿದಿದೆ. ಅಂಚೆ ಇಲಾಖೆಯ ಉಳಿತಾಯ ಖಾತೆಗೆ ಈವರೆಗೆ ಶೇ 4ರ ಬಡ್ಡಿ ನೀಡಲಾಗುತ್ತಿತ್ತು. ಇದನ್ನೂ ಶೇ .5ರಷ್ಟು ಕಡಿಮೆ ಮಾಡಿದೆ. ಇನ್ನು ಮುಂದೆ ಉಳಿತಾಯ ಖಾತೆಗಳಿಗೆ ಕೇವಲ ಶೇ 3.5ರ ಬಡ್ಡಿ ಸಿಗಲಿದೆ. ಅಂಚೆ ಇಲಾಖೆಯ ಮತ್ತೊಂದು ಜನಪ್ರಿಯ ಯೋಜನೆಯಾಗಿರುವ ಆವರ್ತ ಠೇವಣಿ ಯೋಜನೆಯ (Recurring Deposit Scheme) ಬಡ್ಡಿದರಗಳೂ ಯದ್ವಾತದ್ವಾ ಇಳಿದಿವೆ. 5 ವರ್ಷದ ಆರ್​ಡಿಗೆ ಈಗ ಸಿಗುವುದು ಕೇವಲ ಶೇ 5.3ರ ಬಡ್ಡಿದರ.

 

ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ ರೂಪಿಸಿದ ವಿನೂತನ ಮಾದರಿಯ ಹಣಕಾಸು ಯೋಜನೆ ಸುಕನ್ಯಾ ಸಮೃದ್ಧಿಯ ಬಡ್ಡಿದರವೂ ಶೇ 7ರ ಗಡಿಯಿಂದ ಕೆಳಗಿಳಿದಿದೆ. ಈ ಮೊದಲು ಸುಕನ್ಯಾ ಸಮೃದ್ಧಿಗೆ ಶೇ 7.6 ಬಡ್ಡಿ ಸಿಗುತ್ತಿತ್ತು. ಇನ್ನು ಮುಂದೆ ಕೇವಲ ಶೇ 6.9ರಷ್ಟು ಬಡ್ಡಿ ಸಿಗಲಿದೆ. ತೆರಿಗೆ ಉಳಿತಾಯಕ್ಕೆ ಬಳಕೆಯಾಗುವ ಜನಪ್ರಿಯ ಯೋಜನೆ ರಾಷ್ಟ್ರೀಯ ಉಳಿತಾಯ ಪತ್ರದ (National Savings Certificate – NSC) ಬಡ್ಡಿದರವೂ ಶೇ 6.8ರಿಂದ ಶೇ 5.9ಕ್ಕೆ ಇಳಿದಿದೆ. ಕಿಸಾನ್ ವಿಕಾಸ್ ಪತ್ರಕ್ಕೆ ಶೇ 6.2ರ ಬಡ್ಡಿ ನಿಗದಿಪಡಿಸಲಾಗಿದೆ. ಈ ಪತ್ರಗಳಲ್ಲಿ ಹೂಡಿಕೆಯು 138 ತಿಂಗಳ ನಂತರ ದ್ವಿಗುಣಗೊಳ್ಳುತ್ತದೆ. ಈ ಮೊದಲು ಕಿಸಾನ್ ವಿಕಾಸ್ ಪತ್ರಕ್ಕೆ ಶೇ 6.9ರ ಬಡ್ಡಿಯಿತ್ತು. ಹೂಡಿಕೆಯು 124 ತಿಂಗಳಲ್ಲಿ ದ್ವಿಗುಣವಾಗುತ್ತಿತ್ತು.
ಇಂದಿನಿಂದ ಈ ನೂತನ ದರಗಳು ಜಾರಿಗೆ ಬಂದಿದ್ದು ಪಿಪಿಎಫ್, ಸುಕನ್ಯಾ ಸಮೃದ್ಧಿಯಂಥ ಪ್ರತಿ ವರ್ಷ ಬಡ್ಡಿ ದರಗಳು ಬದಲಾಗುವ ಯೋಜನೆಗಳನ್ನು ಹೊರತುಪಡಿಸಿ ಉಳಿದ ಯೋಜನೆಗಳನ್ನು ಈ ಹಿಂದೆಯೇ ಆರಂಭಿಸಿದ್ದಲ್ಲಿ, ಖಾತೆ ಆರಂಭಿಸಿದಾಗ ಚಾಲ್ತಿಯಲ್ಲಿದ್ದ ಬಡ್ಡಿದರವೇ ಅವಧಿ ಪೂರ್ಣ ಚಾಲ್ತಿಯಲ್ಲಿರುತ್ತದೆ.

See also  ಜೈಲಿನಿಂದ ಬಿಡುಗಡೆಯಾದ ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು