News Kannada
Thursday, December 08 2022

ದೇಶ-ವಿದೇಶ

ಕೋವಿಡ್ ಬಾಧಿತ ರಾಜ್ಯಗಳಿಗೆ ರಿಲಯನ್ಸ್​ನಿಂದ ದಿನವೂ 700 ಟನ್ ಆಮ್ಲಜನಕ ಪೂರೈಕೆ

Photo Credit :

ಕೋವಿಡ್ ಬಾಧಿತ ರಾಜ್ಯಗಳಿಗೆ ರಿಲಯನ್ಸ್​ನಿಂದ ದಿನವೂ 700 ಟನ್ ಆಮ್ಲಜನಕ ಪೂರೈಕೆ

ನವದೆಹಲಿ, : ಉದ್ಯಮಿ ಮುಕೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಲಿ. ತನ್ನ ಜಾಮ್ನಗರ ತೈಲ ಸಂಸ್ಕರಣೆ ಘಟಕವನ್ನು ವೈದ್ಯಕೀಯ ಶ್ರೇಣಿಯ ಆಮ್ಲಜನಕ ಉತ್ಪಾದನಾ ಘಟಕವನ್ನಾಗಿ ಪರಿವರ್ತಿಸಿದೆ. ಪ್ರತಿ ದಿನ ಇಲ್ಲಿ 700 ಟನ್​ಗೂ ಅಧಿಕ ಆಮ್ಲಜನಕ ಉತ್ಪಾದನೆ ಮಾಡುತ್ತಿದ್ದು, ಕೋವಿಡ್-19ರಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ರಾಜ್ಯಗಳಿಗೆ ಉಚಿತವಾಗಿ ಪೂರೈಸಲಾಗುತ್ತಿದೆ. ಗುಜರಾತ್​ನ ಜಾಮ್ನಗರದಲ್ಲಿರುವ ಸಂಸ್ಕರಣಾಗಾರವು ಆರಂಭದಲ್ಲಿ 100 ಟನ್​ನಷ್ಟಯ ವೈದ್ಯಕೀಯ ಶ್ರೇಣಿಯ ಆಮ್ಲಜನಕವನ್ನು ಉತ್ಪಾದಿಸುತ್ತಿತ್ತು. ಇದನ್ನು ಕೂಡಲೇ 700 ಟನ್ ಸಾಮರ್ಥ್ಯಕ್ಕೆ ವೃದ್ಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಗುಜರಾತ್, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳಿಗೆ ಆಮ್ಲಜನಕ ಪೂರೈಕೆ ಮಾಡುತ್ತಿದ್ದು, ಇದು ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ 70,000ಕ್ಕೂ ಅಧಿಕ ರೋಗಿಗಳಿಗೆ ಪ್ರತಿ ದಿನ ನೆಮ್ಮದಿ ಒದಗಿಸುತ್ತಿದೆ. ಕಂಪೆನಿಯು ವೈದ್ಯಕೀಯ ಶ್ರೇಣಿಯ ಆಮ್ಲಜನಕ ಉತ್ಪಾದನೆ ಸಾಮರ್ಥ್ಯವನ್ನು 1,000 ಟನ್​ಗೆ ಹೆಚ್ಚಿಸಲು ಉದ್ದೇಶಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಯಾವುದೇ ಸಮಯದ ವಿವರವನ್ನು ನೀಡಿಲ್ಲ.
ಜಾಮ್​ನಗರದ ಸಂಸ್ಕರಣಾಗಾರದಲ್ಲಿ ವೈದ್ಯಕೀಯ ಶ್ರೇಣಿಯ ಆಮ್ಲಜನಕವನ್ನು ಉತ್ಪಾದನೆ ಮಾಡುತ್ತಿರಲಿಲ್ಲ. ಅಲ್ಲಿ ಕಚ್ಚಾ ತೈಲಗಳನ್ನು ಡೀಸೆಲ್, ಪೆಟ್ರೋಲ್ ಮತ್ತು ಜೆಟ್ ಇಂಧನಗಳಂತಹ ಉತ್ಪನ್ನಗಳನ್ನು ಪರಿವರ್ತಿಸಲಾಗುತ್ತಿತ್ತು. ಆದರೆ, ಕೊರೋನಾ ವೈರಸ್ ಪ್ರಕರಣಗಳ ತೀವ್ರ ಏರಿಕೆಯ ಕಾರಣದಿಂದ ಆಮ್ಲಜನಕಕ್ಕೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಿಲಯನ್ಸ್, ವೈದ್ಯಕೀಯ ಶ್ರೇಣಿಯ ಆಮ್ಲಜನಕಗಳನ್ನು ಉತ್ಪಾದಿಸುವ ಮತ್ತು ಪೂರೈಕೆ ಮಾಡುವ ಸಾಧನಗಳನ್ನು ಅಳವಡಿಸಿ ಚಟುವಟಿಕೆ ನಡೆಸುತ್ತಿದೆ.ಕೈಗಾರಿಕಾ ಆಮ್ಲಜನಕವನ್ನು ವೈದ್ಯಕೀಯ ಶ್ರೇಣಿಯ ಆಮ್ಲಜನಕ ಉತ್ಪಾದನೆಗಾಗಿ ಪರಿವರ್ತಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ‘ಭಾರತದೆಲ್ಲೆಡೆಗಿನ ರಾಜ್ಯಗಳಿಗೆ ಪ್ರತಿ ದಿನ ಸುಮಾರು 700 ಟನ್ ಆಮ್ಲಜನಕವನ್ನು ಪೂರೈಕೆ ಮಾಡಲಾಗುತ್ತಿದೆ. ಇದು ದಿನವೂ 70,000ಕ್ಕೂ ಅಧಿಕ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ನೆಮ್ಮದಿ ನೀಡುತ್ತಿದೆ’ ಎಂದು ಈ ವಿಭಾಗದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.
‘ಗುಜರಾತ್​ಗೆ ರಿಲಯನ್ಸ್ ಜಾಮ್​ನಗರದಿಂದ ಪ್ರತಿ ದಿನವೂ 400 ಟನ್ ಆಮ್ಲಜನಕವನ್ನು ಪೂರೈಸಲಾಗುತ್ತಿದೆ. ಇದು ಗುಜರಾತ್ ಕುರಿತ ನಮ್ಮ ಬದ್ಧತೆಯನ್ನು ತೋರಿಸುತ್ತದೆ’ ಎಂದು ಗುಜರಾತ್ ಕ್ರಿಕೆಟ್ ಸಂಸ್ಥೆಯ ಉಪಾಧ್ಯಕ್ಷ ಹಾಗೂ ರಿಲಯನ್ಸ್ ಮಾಲೀಕರ ಜತೆ ನಿಕಟ ಸಂಬಂಧ ಹೊಂದಿರುವ ಧನರಾಜ್ ನಥ್ವಾನಿ ಮಂಗಳವಾರ ಟ್ವೀಟ್ ಮಾಡಿದ್ದಾರೆ.
ಜಗತ್ತಿನ ಅತ್ಯಂತ ದೊಡ್ಡ ಸಂಸ್ಕರಣಾಗಾರವನ್ನು ಗುಜರಾತ್​ನ ಜಾಮ್ನ ಗರದಲ್ಲಿ ರಿಲಯನ್ಸ್ ನಡೆಸುತ್ತಿದೆ. ವೈದ್ಯಕೀಯ ಶ್ರೇಣಿಯ ಆಮ್ಲಜನಕ ಪೂರೈಕೆಯು, ಪ್ರಸ್ತುತದ ಸಾಂಕ್ರಾಮಿಕ ಸನ್ನಿವೇಶದಲ್ಲಿ ನೆರವು ಒದಗಿಸುವ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ರಿಲಯನ್ಸ್ ಫೌಂಡೇಷನ್​ಗಳ ಮತ್ತೊಂದು ಮಹತ್ವದ ಯೋಜನೆಯಾಗಿದೆ.ರಿಲಯನ್ಸ್ ಫೌಂಡೇಷನ್ ಬೃಹನ್ ಮುಂಬೈ ಮುನಿಸಿಪಲ್ ಕಾರ್ಪೊರೇಷನ್ನ (ಬಿಎಂಸಿ) ಸಹಯೋಗದಲ್ಲಿ ಮುಂಬೈನಲ್ಲಿ ದೇಶದ ಮೊದಲ ಕೋವಿಡ್ ಆಸ್ಪತ್ರೆಯನ್ನು ಸ್ಥಾಪಿಸಿತ್ತು. 100 ಹಾಸಿಗೆಗಳ ಆಸ್ಪತ್ರೆಯನ್ನು ಕೇವಲ ಎರಡು ವಾರದಲ್ಲಿ ಸ್ಥಾಪಿಸಲಾಗಿತ್ತು. ಶೀಘ್ರದಲ್ಲೇ ಅದನ್ನು 250 ಹಾಸಿಗೆ ಸಾಮರ್ಥ್ಯಕ್ಕೆ ಹೆಚ್ಚಿಸಲಾಗಿತ್ತು.
ಮಹಾರಾಷ್ಟ್ರದ ಲೋಧಿವಲಿಯಲ್ಲಿ ಸಂಪೂರ್ಣ ಸವಲತ್ತಿನ ಐಸೋಲೇಷನ್ ಸೌಲಭ್ಯವನ್ನು ಕೂಡ ರಿಲಯನ್ಸ್ ನಿರ್ಮಿಸಿ, ಅದನ್ನು ಜಿಲ್ಲಾಧಿಕಾರಿಗಳಿಗೆ ಒಪ್ಪಿಸಿದೆ. ಇದಲ್ಲದೆ, ಮುಂಬೈನ ಸ್ಪಂದನಾ ಹೋಲಿಸ್ಟಿಕ್ ಮದರ್ ಆಂಡ್ ಚೈಲ್ಡ್ ಕೇರ್ ಆಸ್ಪತ್ರೆಯಲ್ಲಿ ಶಂಕಿತ ಕೋವಿಡ್ ರೋಗಿಗಳಿಗಾಗಿ ಕ್ವಾರೆಂಟೈನ್ ವಾರ್ಡ್ ನಿರ್ಮಿಸಲು ರಿಲಯನ್ಸ್ ಫೌಂಡೇಷನ್ ನೆರವು ನೀಡಿದೆ.ದೆಹಲಿಯ ಸರ್ದಾರ್ ಪಟೇಲ್ ಕೋವಿಡ್-19 ಕೇರ್ ಕೇಂದ್ರದಲ್ಲಿ ಡಿಜಿಟಲ್ ಮತ್ತು ವೈದ್ಯಕೀಯ ಮೂಲಸೌಕರ್ಯ ಸ್ಥಾಪನೆಗೆ ಬೆಂಬಲ ಕೊಟ್ಟಿದೆ. ಇದರ ಜತೆಗೆ, ಮುಂಬೈನಲ್ಲಿ ಎಚ್ಬಿಟಿ ಟ್ರಾಮಾ ಆಸ್ಪತ್ರೆಯಲ್ಲಿ 10 ಹಾಸಿಗೆಯ ಡಯಾಲಿಸಿಸ್ ಕೇಂದ್ರವನ್ನು ಬಿಎಂಸಿ ಸಹಯೋಗದಲ್ಲಿ ಸರ್ ಎಚ್ಎನ್ ರಿಲಯನ್ಸ್ ಫೌಂಡೇಷನ್ ಹಾಸ್ಪಿಟಲ್ ನಿರ್ಮಿಸಿದೆ.ಸರ್ ಎಚ್ಎನ್ ರಿಲಯನ್ಸ್ ಫೌಂಡೇಷನ್ ಹಾಸ್ಪಿಟಲ್, ಪ್ಲಾಸ್ಮಾ ಥೆರಪಿಯ ದಕ್ಷತೆಯನ್ನು ಮೌಲ್ಯಮಾಪನ ಮಾಡಲು ಐಸಿಎಂಆರ್ ಗುರುತಿಸಿರುವ ಮಹಾರಾಷ್ಟ್ರದ ಮೊದಲ ಬಹು-ಕೇಂದ್ರೀಯ ಕ್ಲಿನಿಕಲ್ ಪ್ರಯೋಗದ ಸಂಸ್ಥೆಯಾಗಿದೆ.
ರಿಲಯನ್ಸ್ ದಿನವೊಂದಕ್ಕೆ 1,00,000 ಪಿಪಿಇ ಕಿಟ್ ಮತ್ತು ಫೇಸ್ ಮಾಸ್ಕ್​ಗಳನ್ನು ಭಾರತದ ಆರೋಗ್ಯ ಹಾಗೂ ಮುಂಚೂಣಿ ಕೆಲಸಗಾರರಿಗಾಗಿ ತಯಾರಿಸುತ್ತಿದೆ. ಕಳೆದ ವರ್ಷ ರಾಷ್ಟ್ರವ್ಯಾಪಿ ಲಾಕ್​ಡೌನ್​ ಆದ ಸಂದರ್ಭದಲ್ಲಿ ತುರ್ತು ಸೇವೆಗಳಿಗೆ ಅಡಚಣೆಯಾಗದಂತೆ ನೋಡಿಕೊಳ್ಳಲು 18 ರಾಜ್ಯಗಳ 249 ಜಿಲ್ಲೆಗಳಲ್ಲಿ 14,000 ಆಂಬುಲೆನ್ಸ್​ಗಳಿಗಾಗಿ 5.5 ಲಕ್ಷ ಲೀಟರ್ ಉಚಿತ ಇಂಧನವನ್ನು ರಿಲಯನ್ಸ್ ಒದಗಿಸಿತ್ತು.ರಿಲಯನ್ಸ್ ಲೈಫ್ ಸೈನ್ಸಸ್ ಸಂಸ್ಥೆಯು ಪರಿಣಾಮಕಾರಿ ಟೆಸ್ಟ್ ಕಿಟ್​ಗಳು ಮತ್ತು ಇತರೆ ಸಾಮಗ್ರಿಗಳನ್ನು ಒದಗಿಸುವ ಮೂಲಕ ಭಾರತದ ಪರೀಕ್ಷಾ ಸಾಮರ್ಥ್ಯ ಹೆಚ್ಚಿಸಲು ಸಹಾಯ ಮಾಡುತ್ತಿದೆ. ಲಾಕ್​ಡೌನ್​ ವೇಳೆ ಸಂಕಷ್ಟದಲ್ಲಿರುವ ಮತ್ತು ಸಂಪನ್ಮೂಲದ ಕೊರತೆಯಿರುವ ಸಮುದಾಯಗಳಿಗೆ ಸಹಾಯ ಮಾಡಲು, ರಿಲಯನ್ಸ್ ಫೌಂಡೇಷನ್ ಮಿಷನ್ ಅನ್ನ ಸೇವಾ ಯೋಜನೆ ಆರಂಭಿಸಿತ್ತು. ಇದು ಜಗತ್ತಿನಲ್ಲಿ ಕಾರ್ಪೊರೇಟ್ ಪ್ರತಿಷ್ಠಾನವೊಂದು ಆರಂಭಿಸಿದ ಅತಿ ದೊಡ್ಡ ಆಹಾರ ವಿತರಣಾ ಯೋಜನೆಯಾಗಿತ್ತು.ಮಿಷನ್ ಅನ್ನ ಸೇವಾ ಯೋಜನೆಯು 18 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಗಳಲ್ಲಿ 80+ ಜಿಲ್ಲೆಗಳಲ್ಲಿ 5.5 ಕೋಟಿಗೂ ಅಧಿಕ ಊಟಗಳನ್ನು ಪೂರೈಸಿದೆ. ಪಿಎಂ-ಕೇರ್ಸ್ ಫಂಡ್ ಸೇರಿದಂತೆ ವಿವಿಧ ಪರಿಹಾರ ನಿಧಿಗಳಿಗೆ ರಿಲಯನ್ಸ್ 556 ಕೋಟಿ ರೂಪಾಯಿ ದೇಣಿಗೆ ನೀಡಿದೆ.

See also  ಹಲ್ಲೆಕೋರರಿಂದ ಪತಿಯ ಪ್ರಾಣ ಕಾಪಾಡಿದ ಪತ್ನಿ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು