News Kannada
Friday, October 07 2022

ದೇಶ-ವಿದೇಶ

ಜನರ ಸಾವು ಸರ್ಕಾರದ ಇಚ್ಛೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದ ದೆಹಲಿ ಹೈಕೋರ್ಟ್‌ - 1 min read

Photo Credit :

ಜನರ ಸಾವು ಸರ್ಕಾರದ ಇಚ್ಛೆಯೇ  ಎಂದು ಆಕ್ರೋಶ ವ್ಯಕ್ತಪಡಿಸಿದ  ದೆಹಲಿ ಹೈಕೋರ್ಟ್‌

ನವದೆಹಲಿ: ರೆಮ್‌ಡಿಸಿವಿರ್‌ ಚುಚ್ಚುಮದ್ದು ನೀಡಿಕೆಗೆ ಸಂಬಂಧಿಸಿ ಕೇಂದ್ರ ಸರ್ಕಾರ ರೂಪಿಸಿರುವ ನಿಯಮವೊಂದು ದೆಹಲಿ ಹೈಕೋರ್ಟ್‌ನ ಅಸಮಾಧಾನಕ್ಕೆ ಕಾರಣವಾಗಿದೆ. ವೈದ್ಯಕೀಯ ಆಮ್ಲಜನಕ ಬೆಂಬಲದಲ್ಲಿ ಇರುವ ರೋಗಿಗಳಿಗೆ ಮಾತ್ರ ರೆಮ್‌ಡಿಸಿವಿರ್‌ ಔಷಧ ನೀಡಬೇಕು ಎಂಬುದು ಹೊಸ ನಿಯಮ. ಇಂತಹ ನಿಮಯ ಮಾಡಿ ಜನರು ಸಾಯುವುದನ್ನು ಸರ್ಕಾರ ಬಯಸಿದೆಯೇ ಎಂದು ಹೈಕೋರ್ಟ್‌ ಪ್ರಶ್ನಿಸಿದೆ.
‘ಇದು ತಪ್ಪು. ಯೋಚನೆಯೇ ಮಾಡದೆ ತೆಗೆದುಕೊಂಡ ನಿರ್ಧಾರ ಇದು. ಆಮ್ಲಜನಕ ಬೆಂಬಲದಲ್ಲಿ ಇಲ್ಲದ ರೋಗಿಗಳಿಗೆ ಈಗ ರೆಮ್‌ಡಿಸಿವಿರ್‌ ಚುಚ್ಚುಮದ್ದು ಸಿಗುವುದಿಲ್ಲ. ಜನರು ಸಾಯುವುದೇ ನಿಮಗೆ ಬೇಕಾದಂತೆ ಕಾಣಿಸುತ್ತಿದೆ’ ಎಂದು ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್‌ ಅವರ ಪೀಠವು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಔಷಧದ ಕೊರತೆಯ ಪ್ರಮಾಣವನ್ನು ಕಡಿಮೆ ಮಾಡುವುದಕ್ಕೆ ಇಂತಹ ನಿರ್ಧಾರ ಕೈಗೊಂಡಂತೆಯೂ ಕಾಣಿಸುತ್ತಿದೆ. ಇವು ಸಂಪೂರ್ಣವಾಗಿ ಅಸಮರ್ಪಕ ನಿರ್ವಹಣೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ಕೋವಿಡ್‌ ಬಾಧಿತ ವಕೀಲರೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ‍ಪೀಠ ನಡೆಸಿತು. ಆ ವಕೀಲರಿಗೆ ರೆಮ್‌ಡಿಸಿವಿರ್‌ನ ಆರು ಡೋಸ್‌ ಬೇಕಿತ್ತು. ಸಿಕ್ಕಿದ್ದು ಮೂರು ಮಾತ್ರ. ಕೋರ್ಟ್‌ ಮಧ್ಯಪ್ರವೇಶದ ಬಳಿಕ ಮೂರು ಡೋಸ್‌ ಔಷಧ ನೀಡಲಾಗಿದೆ.
ವೈದ್ಯಕೀಯ ಆಮ್ಲಜನಕ ಅಥವಾ ರೆಮ್‌ಡಿಸಿವಿರ್‌ನಂತಹ ಅಗತ್ಯ ಔಷಧಗಳನ್ನು ಜನರು ಸಂಗ್ರಹಿಸಿ ಇರಿಸಿಕೊಳ್ಳಬಾರದು. ಇವುಗಳಿಗಾಗಿ ಕಾಳಸಂತೆಯನ್ನು ಅವಲಂಬಿಸಬಾರದು ಎಂದು ದೆಹಲಿ ಹೈಕೋರ್ಟ್‌ ಹೇಳಿದೆ.‘ಇಂತಹ ಸಂದರ್ಭಗಳಲ್ಲಿ ಜನರು ಒಟ್ಟಾಗಬೇಕು, ತಮ್ಮಲ್ಲಿರುವ ಮೌಲ್ಯಗಳನ್ನು ಪ್ರದರ್ಶಿಸಬೇಕು’ ಎಂದೂ ಹೈಕೋರ್ಟ್‌ ಹೇಳಿದೆ. ನ್ಯಾಯಮೂರ್ತಿಗಳಾದ ವಿಪಿನ್‌ ಸಂಘಿ ಮತ್ತು ರೇಖಾ ಪಲ್ಲಿ ಅವರ ಪೀಠವು ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್‌ ಸ್ಥಿತಿಯ ಬಗ್ಗೆ ಸ್ವಯಂ ಪ್ರೇರಣೆಯಿಂದ ವಿಚಾರಣೆ ನಡೆಸಿದೆ. ದೇಶದಲ್ಲಿ ಕೋವಿಡ್‌ನಿಂದಾಗಿ ಸತ್ತವರ ಸಂಖ್ಯೆ 2,01,187ಕ್ಕೆ ಏರಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಂದರೆ 66,170 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಕರ್ನಾಟಕದಲ್ಲಿ 13,728 ಜನರು ಈ ಪಿಡುಗಿನಿಂದ ಮೃತಪಟ್ಟಿದ್ದಾರೆ. ಮೃತರಲ್ಲಿ ಶೇ 70ಕ್ಕೂ ಹೆಚ್ಚು ಮಂದಿಗೆ ಇತರ ಅನಾರೋಗ್ಯಗಳೂ ಇದ್ದವು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕೋವಿಡ್‌–19 ತಡೆಗೆ ಪರಿಣಾಮಕಾರಿ ಕ್ರಮ ಕೈಗೊಳ್ಳುವಲ್ಲಿ ‘ವಿಫಲ’ವಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರವನ್ನು ಅಲಹಾಬಾದ್‌ ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ಪ್ರಮುಖ ನಗರಗಳಲ್ಲಿ ಪರಿಸ್ಥಿತಿ ಅಸ್ತವ್ಯಸ್ತವಾಗಿದೆ. ಜನರು ತಮ್ಮ ಯೋಗಕ್ಷೇಮವನ್ನು ತಾವೇ ನೋಡಿಕೊಳ್ಳಬೇಕಾದ ಸ್ಥಿತಿ ಇದೆ ಎಂದು ಕೋರ್ಟ್‌ ಹೇಳಿದೆ.
ಗ್ರಾಮ ಪಂಚಾಯಿತಿಗಳಿಗೆ ಇತ್ತೀಚೆಗೆ ನಡೆದ ಮತದಾನ ಮತ್ತು ಪ್ರಚಾರ ಸಂದರ್ಭದಲ್ಲಿ ಕೋವಿಡ್ ತಡೆ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿಲ್ಲ ಎಂದು ರಾಜ್ಯ ಚುನಾವಣಾ ಆಯೋಗವನ್ನೂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ 135 ಶಿಕ್ಷಕರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ ಎಂದು ಪ್ರಕಟವಾಗಿರುವ ವರದಿಯನ್ನು ಕೋರ್ಟ್‌ ಉಲ್ಲೇಖಿಸಿದೆ. ರಾಜ್ಯದಲ್ಲಿ ಚುನಾವಣಾ ಕೆಲಸ ನಿರ್ವಹಿಸಿದ್ದ 200 ಶಿಕ್ಷಕರು ಕೋವಿಡ್‌ನಿಂದ ಮೃತಪಟ್ಟರೆ, ಎರಡು ಸಾವಿರಕ್ಕೂ ಹೆಚ್ಚು ಶಿಕ್ಷಕರಿಗೆ ಕೋವಿಡ್‌ ತಗುಲಿದೆ ಎಂದು ಶಿಕ್ಷಕರ ಸಂಘಟನೆಗಳು ಹೇಳಿವೆ. ‘ಪ್ರಮುಖ ನಗರಗಳ ರಸ್ತೆ ಮತ್ತು ಬೀದಿಗಳಲ್ಲಿ ಕೊರೊನಾದ ಪ್ರೇತಗಳು ಅಡ್ಡಾಡುತ್ತಿವೆ. ಸಂಪತ್ತು ಇರುವವರು ಬದುಕಿಕೊಳ್ಳುತ್ತಾರೆ, ಇಲ್ಲದವರು ಈ ಹಿಂದಿನ ಸಾಂಕ್ರಾಮಿಕಗಳ ಸಂದರ್ಭದಲ್ಲಿ ಆದಂತೆ ಸಾಯಬಹುದು’ ಎಂದು ನ್ಯಾಯಮೂರ್ತಿ ಸಿದ್ಧಾರ್ಥ ವರ್ಮ ಮತ್ತು ಅಜಿತ್‌ ಕುಮಾರ್‌ ಅವರ ಪೀಠವು ಹೇಳಿದೆ.
ತಾವು ಹೇಳಿದಂತೆಯೇ ಆಗಬೇಕು ಎಂಬ ಮನೋಭಾವವನ್ನು ಅಧಿಕಾರದಲ್ಲಿ ಇರುವವರು ಬಿಡಬೇಕು. ಎಲ್ಲೆಡೆಯಿಂದ ಬರುವ ಸಲಹೆಗಳನ್ನು ಸ್ವೀಕರಿಸಬೇಕು ಎಂದು ಪೀಠ ಅಭಿಪ್ರಾಯಪಟ್ಟಿದೆ. ಲಖನೌ, ನೋಯ್ಡಾ, ಆಗ್ರಾ ಸೇರಿ ಪ್ರಮುಖ ನಗರಗಳ ಆಸ್ಪತ್ರೆಗಳಲ್ಲಿ ಹಾಸಿಗೆ, ತೀವ್ರ ನಿಗಾ ಘಟಕದ ಹಾಸಿಗೆ, ವೆಂಟಿಲೇಟರ್‌, ರೆಮ್‌ಡಿಸಿವಿರ್‌, ಆಮ್ಲಜನಕದ ಬೇಡಿಕೆ ಮತ್ತು ಲಭ್ಯತೆ ಬಗ್ಗೆ ಮಾಹಿತಿ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಏಪ್ರಿಲ್‌ 19ರಿಂದ ಮೇ 2ರ ನಡುವೆ ಮೃತಪಟ್ಟವರ ಸಂಖ್ಯೆ ಎಷ್ಟು ಎಂಬುದನ್ನು ತಿಳಿಸುವಂತೆ ಸೂಚಿಸಿದೆ. ಮೇ 3ರಂದು ಮುಂದಿನ ವಿಚಾರಣೆ ನಡೆಯಲಿದೆ.
ರಾಜ್ಯದ ಐದು ನಗರಗಳಲ್ಲಿ ಲಾಕ್‌ಡೌನ್‌ ಹೇರಬೇಕು ಎಂದು ಇದೇ ಪೀಠ ಈ ಹಿಂದೆ ಆದೇಶಿಸಿತ್ತು. ಆದರೆ, ಆ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ.

See also  ಉನ್ನಾವ್ ಗ್ಯಾಂಗ್ ರೇಪ್: ಬಿಜೆಪಿ ಶಾಸಕನ ಬಂಧನಕ್ಕೆ ಹೈಕೋರ್ಟ್ ಆದೇಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು