ಭಾರತದಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಲಸಿಕೆ ಅಭಿಯಾನವನ್ನು ಆರಂಭಿಸಲಾಗಿದೆ. ಆದರೆ, ಸೂಕ್ತ ಸಮಯಕ್ಕೆ ಕೇಂದ್ರ ಸರ್ಕಾರ ಲಸಿಕೆಯನ್ನು ಯಾವ ರಾಜ್ಯಗಳಿಗೂ ನೀಡದ ಕಾರಣ ಜನರಿಗೆ ಲಸಿಕೆಯನ್ನು ಈವರೆಗೆ ನೀಡಲಾಗಿಲ್ಲ. ಇದಕ್ಕೆ ಕಾರಣ ಲಸಿಕೆಗಳ ಕೊರತೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಲಸಿಕೆ ನೀತಿಯನ್ನು ಅನೇಕರು ಟೀಕಿಸಿದ್ದರು. ನಮ್ಮ ಮಕ್ಕಳಿಗೆ ಸೇರಬೇಕಿದ್ದ ಲಸಿಕೆಯನ್ನು ವಿದೇಶಕ್ಕೆ ಏಕೆ ಕಳುಹಿಸಿದಿರಿ ಎಂದು ಪಿಎಂ ಮೋದಿಯವರನ್ನು ಪ್ರಶ್ನಿಸುವ ಪೋಸ್ಟ್ ನಿನ್ನೆಯಿಂದ ಸಾಮಾಜಿಕ ಜಾಲತಾಣಗಳನ್ನು ವೈರಲ್ ಆಗಿದೆ. ಆದರೆ, ಹೀಗೆ ಟೀಕಿಸಿದ 25ಕ್ಕೂ ಹೆಚ್ಚು ಮಂದಿಯನ್ನು ದೆಹಲಿ ಪೊಲೀಸರು ನಿನ್ನೆ ಬಂಧಿಸಿ ಎಫ್ಐಆರ್ ದಾಖಲಿಸಿದ್ದಾರೆ. ಕೇಂದ್ರ ಸರ್ಕಾರದ ಈ ನಡೆಯನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ಇಂದು ಸಾಮಾಜಿಕ ಜಾಲತಾಣಗಳಲ್ಲಿ, “ಮೋದಿಯವರೇ ನಮ್ಮ ಮಕ್ಕಳ ಲಸಿಕೆಯನ್ನು ವಿದೇಶಕ್ಕೆ ಏಕೆ ಕಳಿಸಿದಿರಿ?” ಮತ್ತ “ನಮ್ಮನ್ನೂ ಬಂಧಿಸಿ” ಎಂಬ ಅಭಿಯಾನವನ್ನು ಆರಂಭಿಸಿದೆ.
ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಇಂದು ತಮ್ಮ ಖಾಸಗಿ ಟ್ವಿಟರ್ ಖಾತೆಯ ಪ್ರೊಫೈಲ್ ಫೋಟೊವನ್ನು ಬದಲಿಸಿದ್ದು, “ಮೋದಿಯವರೇ ನಮ್ಮ ಮಕ್ಕಳ ಲಸಿಕೆಯನ್ನು ವಿದೇಶಕ್ಕೆ ಏಕೆ ಕಳಿಸಿದಿರಿ? ಎಂದು ಪ್ರಶ್ನೆ ಮಾಡಿದ ಜನರನ್ನು ಕೇಂದ್ರ ಸರ್ಕಾರ ಬಂಧಿಸುವುದು ಸರಿಯಾದ ಕ್ರಮ ಎಂದಾದಲ್ಲಿ, ನಾನೂ ಅದನ್ನೇ ಹೇಳುತ್ತೇನೆ. ಹೀಗಾಗಿ ಪೊಲೀಸರು ನನ್ನನ್ನೂ ಬಂಧಿಸಲಿ” ಎಂದು ಆಕ್ರೋಶ ಹೊರಹಾಕಿದ್ದಾರೆ.
ರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ಕಾಂಗ್ರೆಸ್ ನಾಯಕರು ತಮ್ಮ ಟ್ವಿಟರ್ ಪ್ರೊಫೈಲ್ ಪೋಟೋವನ್ನು ಹೀಗೆ ಬದಲಿಸಿಕೊಂಡಿದ್ದಾರೆ. ಇನ್ನೂ ಕರ್ನಾಟಕದ ಮಾಜಿ ಸಿಎಂ ಸಿದ್ದರಾಮಯ್ಯ ಸಹ ತಮ್ಮ ಪ್ರೊಫೈಲ್ ಪೋಟೋವನ್ನು ಬದಲಿಸಿಕೊಂಡಿದ್ದು ಆಂಗ್ಲ ಭಾಷೆಯಲ್ಲಿ, “ಮಾನ್ಯ ಮೋದಿಯವರೇ ನಮ್ಮ ಮಕ್ಕಳ ಲಸಿಕೆಯನ್ನು ವಿದೇಶಕ್ಕೆ ಏಕೆ ಕಳಿಸಿದಿರಿ?” ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕಾಂಗ್ರೆಸ್ ರಾಜ್ಯ ಘಟಕವೂ ಸಹ ತನ್ನ ಟ್ವಿಟರ್ ಖಾತೆಯ ಮೂಲಕ ಇದೇ ಪ್ರಶ್ನೆಯನ್ನು ಪ್ರಧಾನಿ ನರೇಂದ್ರ ಮೋದಿ ಎದುರಿಗೆ ಇಟ್ಟಿದೆ.
ಕಾಂಗ್ರೆಸ್ ರಾಷ್ಟ್ರೀಯ ಘಟಕ ತನ್ನ ಟ್ವಿಟರ್ ಖಾತೆಯಲ್ಲಿ ಹಿಂದಿಯಲ್ಲಿ ಪ್ರಶ್ನೆ ಮಾಡಿದ್ದು, “ದೇಶದಲ್ಲಿ ಕೊರೋನಾದಿಂದ ಅಪಾರ ಜನ ಸಾಯುತ್ತಿದ್ದಾರೆ. ಹೀಗಾಗಿ ನಾವು ಆಮ್ಲಜನಕವನ್ನು ಕೇಳುತ್ತಿದ್ದೇವೆ. ಲಸಿಕೆಯನ್ನು ಕೇಳುತ್ತಿದ್ದೇವೆ. ಆದರೆ, ನಿಮ್ಮಿಂದ ಇದನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಬದಲಾಗಿ ಪ್ರಶ್ನೆ ಮಾಡುವವರನ್ನು ನೀವು ಬಂಧಿಸುತ್ತಿದ್ದೀರಿ” ಎಂದು ಕಿಡಿಕಾರಲಾಗಿದೆ.ಇನ್ನೂ ಆಮ್ ಆದ್ಮಿ ಪಕ್ಷವೂ ಸಹ ಕೇಂದ್ರ ಸರ್ಕಾರದ ಈ ನಡೆಯನ್ನು ಟ್ವಿಟರ್ ಮೂಲಕವೇ ಟೀಕಿಸಿದ್ದು, ಕಾಂಗ್ರೆಸ್ ಅಭಿಯಾನವನ್ನು ಬೆಂಬಲಿಸಿದೆ. ತನ್ನ ಪಕ್ಷದ ಟ್ವಿಟರ್ ಖಾತೆಯಲ್ಲಿ ಆಮ್ ಆದ್ಮಿ ಪಕ್ಷ ಸಹ, “ಮೋದಿಯವರೇ ನಮ್ಮ ಮಕ್ಕಳ ಲಸಿಕೆಯನ್ನು ವಿದೇಶಕ್ಕೆ ಏಕೆ ಕಳಿಸಿದಿರಿ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಕ್ಕಳ ಲಸಿಕೆಯನ್ನು ವಿದೇಶಕ್ಕೆ ಏಕೆ ಕಳಿಸಿದಿರಿ?; ಕೇಂದ್ರದ ವಿರುದ್ಧ ಕಾಂಗ್ರೆಸ್ ಅಭಿಯಾನ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.