News Kannada
Thursday, March 30 2023

ದೇಶ-ವಿದೇಶ

ಕೆಪಿಎಸ್‌ಸಿ ಅಕ್ರಮ ನೇಮಕಾತಿ ಪ್ರಶ್ನಿಸಿ ಹುದ್ದೆ ವಂಚಿತರಿಂದ ಹೈ ಕೋರ್ಟ್‌ ಮೊರೆ ಸಿದ್ದತೆ

Photo Credit :

ಕೆಪಿಎಸ್‌ಸಿ ಅಕ್ರಮ ನೇಮಕಾತಿ ಪ್ರಶ್ನಿಸಿ ಹುದ್ದೆ ವಂಚಿತರಿಂದ ಹೈ ಕೋರ್ಟ್‌ ಮೊರೆ ಸಿದ್ದತೆ

ಬೆಂಗಳೂರು: 2011ನೇ ಸಾಲಿನ 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಂದಿನ ಅಧ್ಯಕ್ಷ ಮತ್ತು 9 ಸದಸ್ಯರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡದಿರಲು ಸಚಿವ ಸಂಪುಟ ಸಭೆ ತೀರ್ಮಾನ ತೆಗೆದುಕೊಂಡ ಬೆನ್ನಲ್ಲೆ, ಸರ್ಕಾರದ ಈ ನಡೆಯನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲು ಹುದ್ದೆ ವಂಚಿತ ಅಭ್ಯರ್ಥಿಗಳು ಸಿದ್ಧತೆ ನಡೆಸಿದ್ದಾರೆ.
ಅಲ್ಲದೆ, ಸರ್ಕಾರದ ಈ ನಡೆಯ ವಿರುದ್ಧ ಕಾನೂನು ತಜ್ಞರು ಕೂಡಾ ಭಿನ್ನ ಧ್ವನಿ ಎತ್ತಿದ್ದಾರೆ. ‘ಈ ತೀರ್ಮಾನ ನೈತಿಕವಾಗಿ ಮತ್ತು ಕಾನೂನು ಪ್ರಕಾರ ಸರಿಯಲ್ಲ. ಇದನ್ನು ಕೋರ್ಟ್‌ನಲ್ಲಿ ಪ್ರಶ್ನಿಸಲು ಸಾಕಷ್ಟು ಅವಕಾಶಗಳಿವೆ. ಯಾರನ್ನೋ ರಕ್ಷಿಸಲು ಸರ್ಕಾರ ಮುಂದಾಗುವ ಬದಲು, ಕೋರ್ಟ್‌ ತೀರ್ಮಾನಕ್ಕೆ ಬಿಡಬೇಕಿತ್ತು’ ಎಂದು ಅಭಿಪ್ರಾಯಪಟ್ಟಿದ್ದಾರೆ.
ವ್ಯಾಪಕ ಭ್ರಷ್ಟಾಚಾರ ನಡೆದಿದೆಯೆಂದು ವಿವಾದಕ್ಕೆ ಒಳಗಾಗಿದ್ದ ಈ ಸಾಲಿನ ನೇಮಕಾತಿಯನ್ನು ಹೈಕೋರ್ಟ್‌ 2018ರ ಮಾರ್ಚ್ 9ರಂದು ರದ್ದುಗೊಳಿಸಿತ್ತು. ಅದೇ ತೀರ್ಪನ್ನು ಸುಪ್ರೀಂ ಕೋರ್ಟ್‌ ಕೂಡಾ ಎತ್ತಿ ಹಿಡಿದಿತ್ತು. ಈ ಪ್ರಕರಣದಲ್ಲಿ ತನಿಖೆ ನಡೆಸಿದ್ದ ಸಿಐಡಿ, ದೋಷಾರೋಪಪಟ್ಟಿ ಸಿದ್ಧಪಡಿಸಿದೆ. ಆದರೆ, ಆರೋಪ ಹೊತ್ತವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡದೆ, ಈ ಸಾಲಿನಲ್ಲಿ ಆಯ್ಕೆಯಾದವರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ. ಪ್ರಾಸಿಕ್ಯೂಷನ್‌ಗೆ ಅನುಮತಿ ನಿರಾಕರಿಸಿದ ಅಂಶವನ್ನೇ ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ನಿರ್ಧರಿಸಿದ್ದೇವೆ’ ಎಂದು ಹುದ್ದೆ ವಂಚಿತ ಅಭ್ಯರ್ಥಿಯೊಬ್ಬರು ತಿಳಿಸಿದರು.
‘ನೈತಿಕವಾಗಿ ಮತ್ತು ಕಾನೂನು ಪ್ರಕಾರ ಸರ್ಕಾರದ ಈ ನಿಲುವು ತಪ್ಪು. ಯಾರದ್ದೊ ಒತ್ತಡಕ್ಕೆ ಅಥವಾ ತೊಂದರೆಯಿಂದ ಹೊರಬರಲು ಸರ್ಕಾರ ಈ ನಿಲುವು ತೆಗೆದುಕೊಂಡು, ಅಭ್ಯರ್ಥಿಗಳ ನೇಮಕಾತಿಗೆ ಮುಂದಾದರೆ ಹುದ್ದೆ ವಂಚಿತ ಅಭ್ಯರ್ಥಿಗಳು ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿಯೇ ಮಾಡುತ್ತಾರೆ’ ಎಂದು ಹೈಕೋರ್ಟ್‌ ವಕೀಲ ವಿಕ್ರಂ ಫಡ್ಕೆ ಹೇಳಿದರು.
‘ಈ ಪ್ರಕರಣದಲ್ಲಿ ಸಿಐಡಿ ಸಿದ್ಧಪಡಿಸಿದ್ದ ಕರಡು ದೋಷಾರೋಪ ಪಟ್ಟಿ ಆಧರಿಸಿ, ಕೆಪಿಎಸ್‌ಸಿಯ ಅಂದಿನ ಅಧ್ಯಕ್ಷರು ಮತ್ತು ಸದಸ್ಯರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ 1988ರ 19(1) ಸೆಕ್ಷನ್ ಮತ್ತು ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) 1973ರ ಸೆಕ್ಷನ್197ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕೆಪಿಎಸ್‌ಸಿ ಅಧ್ಯಕ್ಷ, ಸದಸ್ಯರ ನೇಮಕಾತಿಯಲ್ಲಿ ಸಕ್ಷಮ ಪ್ರಾಧಿಕಾರ ರಾಷ್ಟ್ರಪತಿ. ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ (ಡಿಒಪಿಟಿ) ಕಳುಹಿಸಬೇಕು. ಡಿಒಪಿಟಿ ಅದನ್ನು ರಾಷ್ಟ್ರಪತಿ ಮುಂದೆ ಮಂಡಿಸುವುದು ನಿಯಮ. ಹೀಗಾಗಿ ಪ್ರಸ್ತಾವನ್ನು ಸೆ. 15ರ ಸಚಿವ ಸಂಪುಟ ಸಭೆಗೆ ಮಂಡಿಸಲಾಗಿತ್ತು. ಈ ಸಂಬಂಧ ರಚಿಸಿದ್ದ ಸಂಪುಟ ಉಪ ಸಮಿತಿ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಹೀಗಾಗಿ ಮತ್ತೆ ಸಂಪುಟ ಸಭೆಗೆ ಮಂಡಿಸಲಾಗಿದ್ದು, ಪ್ರಾಸಿಕ್ಯೂಷನ್‌ ಮಂಜೂರಾತಿ ಸಿಕ್ಕಿಲ್ಲ. ಆದರೆ, ಅಭ್ಯರ್ಥಿಗಳ ನೇಮಕಾತಿಯ ತೀರ್ಮಾನ ಆಗಿಲ್ಲ’ ಎಂದು ಸಿಬ್ಬಂದಿ ಮತ್ತು ಸುಧಾರಣಾ ಇಲಾಖೆ (ಡಿಪಿಎಆರ್‌) ಅಧಿಕಾರಿ ತಿಳಿಸಿದರು.
‘2011ರ ಆಯ್ಕೆ ಪಟ್ಟಿಯಲ್ಲಿದ್ದ 362 ಅಭ್ಯರ್ಥಿಗಳ ಪೈಕಿ ಅರ್ಧದಷ್ಟು ಮಂದಿ 2014 ಮತ್ತು 2015 ಆಯ್ಕೆ ಪಟ್ಟಿಯಲ್ಲಿ ನೇಮಕಗೊಂಡಿದ್ದಾರೆ. ಈ ಪ್ರಕರಣ ಮತ್ತೆ ಕೋರ್ಟ್‌ ಮೆಟ್ಟಿಲೇರಿದರೆ, ಅರ್ಹತೆ ಆಧಾರದಲ್ಲಿ ಪಾರದರ್ಶಕವಾಗಿ ನೇಮಕಗೊಂಡು ಹುದ್ದೆ ಪಡೆಯುವ ನಿರೀಕ್ಷೆಯಲ್ಲಿರುವವರು ಏನು ಮಾಡಬೇಕು’ ಎಂದು ಈ ಸಾಲಿನಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಯೊಬ್ಬರು ಪ್ರಶ್ನಿಸಿದರು.‌
ಕೆಪಿಎಸ್‌ಸಿ 2011 ನ. 3ರಂದು ಅರ್ಜಿ ಆಹ್ವಾನಿಸಿ, 2014ರ ಮಾರ್ಚ್ 22ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿತ್ತು. ನೇಮಕದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಅಡ್ವೋಕೇಟ್‌ ಜನರಲ್‌ಗೆ ಅಭ್ಯರ್ಥಿಯೊಬ್ಬರು ಪತ್ರ ಬರೆದಿದ್ದರು. ಎಜಿ ಅಭಿಪ್ರಾಯದ ಮೇರೆಗೆ ವಿಧಾನಸೌಧ ಪೊಲೀಸ್‌ ಠಾಣೆಗೆ ಡಿಪಿಎಆರ್‌ ದೂರು ನೀಡಿತ್ತು. ಆಗ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ 2014ರ ಜೂನ್ 27ರಂದು ಸಿಐಡಿಗೆ ವಹಿಸಿತ್ತು. ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಸಿಐಡಿ ನೀಡಿದ್ದ ಮಧ್ಯಂತರ ವರದಿ ಪರಿಗಣಿಸಿ 2014ರ ಆ. 8ರಂದು ನೇಮಕಾತಿ ಅಧಿಸೂಚನೆಯನ್ನೇ ಸರ್ಕಾರ ಹಿಂಪಡೆದಿತ್ತು. ಇದನ್ನು ಪ್ರಶ್ನಿಸಿ ಆಯ್ಕೆಯಾಗಿದ್ದ ಅಭ್ಯರ್ಥಿಗಳು ಕೆಎಟಿ ಮೆಟ್ಟಿಲೇರಿದ್ದರು. ಸರ್ಕಾರದ ಆದೇಶವನ್ನು ವಜಾಗೊಳಿಸಿದ್ದ ಕೆಎಟಿ, ಅರ್ಹರಿಗೆ ನೇಮಕ ಪತ್ರ ನೀಡುವಂತೆ 2016ರ ಅ. 19ರಂದು ಆದೇಶಿಸಿತ್ತು. ಕೆಎಟಿ ತೀರ್ಪು ಪ್ರಶ್ನಿಸಿ ಹುದ್ದೆ ವಂಚಿತ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ನೇಮಕ ರದ್ದುಪಡಿಸಿತ್ತು.

See also  ಕೋವಿಡ್‌ ಸಹಾಯವಾಣಿಗೆ ನಂಬರ್‌ ನೀಡಿದ ಮಹಿಳೆಯರಿಗೆ ಲೈಂಗಿಕ ಕಿರುಕುಳ

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

145

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು