ಗೂಗಲ್ : ಇಂದು ಗೂಗಲ್ ಪೋಲಿಷ್ ಜೀವಶಾಸ್ತ್ರಜ್ಞ ರುಡಾಲ್ಫ್ ವೀಗಲ್ ಅವರಿಗೆ ತನ್ನ ಡೂಡಲ್ ಮೂಲಕ ವಿಶೇಷ ಗೌರವ ಸಲ್ಲಿಸಿದೆ. ಸಾಂಕ್ರಾಮಿಕ ರೋಗ ಟೈಫಸ್ ವಿರುದ್ಧ ಲಸಿಕೆ ಕಂಡುಹಿಡಿದ ಶ್ರೇಯ ರುಡಾಲ್ಫ್ ಅವರದ್ದು. ಅಷ್ಟೇ ಅಲ್ಲದೆ ಸಾಂಕ್ರಾಮಿಕ ರೋಗದಿಂದ ಹಲವಾರು ಯಹೂದಿಗಳ ಜೀವ ಉಳಿಸಿದ್ದು ರುಡಾಲ್ಫ್. ಇವರ ಜನ್ಮದಿನದಂದು ಗೂಗಲ್ ವಿಶೇಷ ನಮನ ತಿಳಿಸಿದೆ.
ಡೂಡಲ್‌ನಲ್ಲಿ ರುಡಾಲ್ಫ್ ಅವರು ಸಂಶೋಧನೆ ನಡೆಸುತ್ತಾ, ಔಷಧಗಳನ್ನು ಕಂಡುಹಿಡಿಯುವಂತೆ ಮಾಡಲಾಗಿದೆ. ಮೊದಲನೆ ಮಹಾಯುದ್ಧ ಸಂದರ್ಭದಲ್ಲಿ ಟೈಫಸ್ ರೋಗದಿಂದ ಯೂರೋಪ್ ಜನ ತತ್ತರಿಸಿದ್ದರು. ರೋಗ ಎಲ್ಲೆಡೆ ಹರಡಿ ಲಕ್ಷಾಂತರ ಮಂದಿ ಪ್ರಾಣತೆತ್ತರು. ಎಲ್ಲವನ್ನೂ ಕಂಡ ರುಡಾಲ್ಫ್ ಇದಕ್ಕೆ ಲಸಿಕೆ ಕಂಡುಹಿಡಿಯುವ ಪಣ ತೊಟ್ಟರು. ಅಂತೆಯೇ ಟೈಫಸ್ ವಿರುದ್ಧ ಹೋರಾಡುವ ಲಸಿಕೆ ಕಂಡುಹಿಡಿದ ಮೊದಲ ವಿಜ್ಞಾನಿ ಎಂಬ ಹೆಸರಿಗೆ ಪಾತ್ರರಾದರು.
ಲಸಿಕೆ ಪರೀಕ್ಷೆಯನ್ನು ಯಹೂದಿಗಳ ಮೇಲೆ ಮಾಡಿದ್ದು, ಐದು ಸಾವಿರಕ್ಕೂ ಹೆಚ್ಚು ಯಹೂದಿಗಳ ಪ್ರಾಣ ಉಳಿಯಿತು. ಲಸಿಕೆ ಕಂಡುಹಿಡಿದದ್ದು ಹಾಗೂ ಅವರ ಮಾನವೀಯ ಕೆಲಸಗಳನ್ನು ಮೆಚ್ಚಿ ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು. ಹಸ್ತಕ್ಷೇಪದಿಂದಾಗಿ ಎರಡು ಬಾರಿಯೂ ಪ್ರಶಸ್ತಿ ಸ್ವೀಕರಿಸಲು ಆಗಲಿಲ್ಲ. 1957ರಲ್ಲಿ ರುಡಾಲ್ಫ್ ಅವರು ನಿಧನರಾದರು. 2003 ರಲ್ಲಿ ಇಸ್ರೇಲ್ ಅವರಿಗೆ ರಾಷ್ಟ್ರಗಳಲ್ಲಿ ನೀತಿವಂತ ಎಂಬ ಗೌರವ ನೀಡಿತು.