ಪಾಕಿಸ್ತಾನದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಇಮ್ರಾನ್ ಖಾನ್ ಸರ್ಕಾರ ಉರುಳಿ, ಶಹಬಾಜ್ ಷರೀಫ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದೆ. ಪಾಕಿಸ್ತಾನದ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದ ಶಹಬಾಜ್ ಷರೀಫ್ ತಮ್ಮ ಮೊದಲ ಭಾಷಣದಲ್ಲೇ ಕಾಶ್ಮೀರ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ.
ಪಾಕಿಸ್ತಾನ ಭಾರತದೊಂದಿಗೆ ಶಾಂತಿಯನ್ನು ಬಯಸುತ್ತೇವೆ, ಆದರೆ ಕಾಶ್ಮೀರ ಸಮಸ್ಯೆಯ ಪರಿಹಾರವಿಲ್ಲದೆ ಶಾಂತಿ ಸಾಧ್ಯವಿಲ್ಲ ಎಂದು ಶಹಬಾಜ್ ಷರೀಫ್ ಇಸ್ಲಾಮಾಬಾದ್‌ನಲ್ಲಿ ಹೇಳಿದ್ದರು. ಇನ್ನು ಪಾಕಿಸ್ತಾನ ನೂತನ ಪ್ರಧಾನಿಗೆ ಅಭಿನಂದನೆ ಸಲ್ಲಿಸಿದ ಭಾರತದ ಪ್ರಧಾನಿ ನರೇಂದ್ರ ಮೋದಿ, “ಭಾರತ ಭಯೋತ್ಪಾದನೆಯನ್ನು ಬಯಸುವುದಿಲ್ಲ” ಅಂತ ತಿರುಗೇಟು ನೀಡಿದ್ದಾರೆ.
ಪಾಕಿಸ್ತಾನದ 23ನೇ ಪ್ರಧಾನಿಯಾಗಿ ಆಯ್ಕೆಯಾದ ಶಹಬಾಜ್ ಷರೀಫ್ ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್‌ನಲ್ಲಿ ಅಭಿನಂದಿಸಿದ್ದಾರೆ. “ಪಾಕಿಸ್ತಾನದ ಪ್ರಧಾನಿಯಾಗಿ ಆಯ್ಕೆಯಾದ H. E. ಮಿಯಾನ್ ಮುಹಮ್ಮದ್ ಶಹಬಾಜ್ ಷರೀಫ್ ಅವರಿಗೆ ಅಭಿನಂದನೆಗಳು ಅಂತ ಮೋದಿ ಟ್ವೀಟ್ ಮಾಡಿದ್ದಾರೆ.
ಇನ್ನು ಭಾರತವು ಭಯೋತ್ಪಾದನೆ ಮುಕ್ತ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಬಯಸುತ್ತದೆ, ಇದರಿಂದ ನಾವು ನಮ್ಮ ಅಭಿವೃದ್ಧಿ ಸವಾಲುಗಳ ಮೇಲೆ ಕೇಂದ್ರೀಕರಿಸಬಹುದು ಮತ್ತು ನಮ್ಮ ಜನರ ಯೋಗಕ್ಷೇಮ ಮತ್ತು ಸಮೃದ್ಧಿಯನ್ನು ಖಚಿತಪಡಿಸಿಕೊಳ್ಳಬಹುದು” ಎಂದು ಸಂದೇಶ ಕಳಿಸಿದ್ದಾರೆ.
ಇದೇ ವೇಳೆ ಪಾಕಿಸ್ತಾನ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ ಎಂಬುದನ್ನು ಪರೋಕ್ಷವಾಗಿ ಪುನರುಚ್ಛಿಸಿರುವ ಪ್ರಧಾನಿ ಮೋದಿ, ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗಾಗಿ ಭಯೋತ್ಪಾದನೆಯನ್ನು ಕೊನೆಗಾಣಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪಾಕಿಸ್ತಾನದ 23ನೇ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದ ಶಹಬಾಜ್ ಷರೀಫ್ ತಮ್ಮ ಮೊದಲ ಭಾಷಣದಲ್ಲೇ ಕಾಶ್ಮೀರ ವಿಚಾರವನ್ನು ಪ್ರಸ್ತಾಪ ಮಾಡಿದ್ದರು. ಕಾಶ್ಮೀರದ ವಿಶೇಷಾಧಿಕಾರ ಭಾರತ ರದ್ದು ಮಾಡಿರುವ ಬಗ್ಗೆ ಪ್ರಸ್ತಾಪಿಸಿದ್ದರು. ಕಾಶ್ಮೀರದ ಜನರಿಗೆ ರಾಜತಾಂತ್ರಿಕ, ನೈತಿಕ ಬೆಂಬಲ ನೀಡುವುದರ ಜೊತೆಗೆ ಎಲ್ಲ ಅಂತರರಾಷ್ಟ್ರೀಯ ವೇದಿಕೆಗಳಿಗೆ ಈ ವಿಚಾರವನ್ನು ಒಯ್ಯುವ ಭರವಸೆ ನೀಡಿದ್ದರು.
ಭಾರತದ ಜೊತೆ ಉತ್ತಮ ಸಂಬಂಧ ಹೊಂದುವ ಉದ್ದೇಶವಿದೆ ಎಂದಿದ್ದ ಅವರು, ಕಾಶ್ಮೀರ ವಿಷಯ ಇತ್ಯರ್ಥವಾಗದಿದ್ದರೆ ಇದು ಸಾಧ್ಯವಾಗುವುದಿಲ್ಲ ಎಂದಿದ್ದರು. ‘ನಮ್ಮ ದೇಶದ ಪಕ್ಕದಲ್ಲಿ ಯಾರಿರಬೇಕು ಎಂದು ಆಯ್ಕೆ ಮಾಡಲಾಗದು. ನಾವು ನೆರೆಹೊರೆಯವರಾಗಿ ಇರಬೇಕಷ್ಟೇ. ಆದರೆ, ದೇಶ ಉದಯವಾದ ದಿನದಿಂದಲೂ ಭಾರತದ ಜೊತೆಗೆ ಪಾಕಿಸ್ತಾನದ ಸಂಬಂಧ ಉತ್ತಮವಾಗಿಲ್ಲ. ಇದು ದುರದೃಷ್ಟಕರ ವಿಚಾರ’ ಎಂದು ಶಹಬಾಜ್ ಹೇಳಿದ್ದರು.
ಕಾಶ್ಮೀರದ ವಿಶೇಷಾಧಿಕಾರ ರದ್ದುಪಡಿಸಿದ ಭಾರತದ ವಿರುದ್ಧ ಇಮ್ರಾನ್ ಖಾನ್ ಅವರು ಯಾವುದೇ ಗಂಭೀರ ರಾಜತಾಂತ್ರಿಕ ಯತ್ನಗಳನ್ನು ಮಾಡಲಿಲ್ಲ ಎಂದು ಪಾಕ್ ನೂತನ ಪ್ರಧಾನಿ ಆರೋಪಿಸಿದರು. ‘ಕಾಶ್ಮೀರದಲ್ಲಿ ಬಲವಂತದ ಅತಿಕ್ರಮಣ ನಡೆದಾಗ ನಮ್ಮಿಂದ ಏನೂ ಮಾಡಲಾಗಲಿಲ್ಲ. ಕಾಶ್ಮೀರದ ಜನರ ರಕ್ತವು ರಸ್ತೆಗಳಲ್ಲಿ ಹರಿಯಿತು. ಕಣಿವೆಯು ರಕ್ತದಿಂದ ಕೆಂಪಾಯಿತು’ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ಗಡಿಭಾಗದ ಜನರ ಸಮಸ್ಯೆಗಳ ಇತ್ಯರ್ಥಕ್ಕೆ ಮುಂದಾಗಬೇಕು ಎಂದು ಶಹಬಾಜ್ ಷರೀಫ್ ಹೇಳಿದ್ದರು.