ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಅಂಕಿಅಂಶ ಆಯೋಗ ಮತ್ತು ಇತರ ಎರಡು ಸಂಸ್ಥೆಗಳಿಗೆ ಭಾರತ ಆಯ್ಕೆಯಾಗಿದೆ. ಆದರೆ ಈ ವೇಳೆ ಈ ಕ್ರಮವನ್ನು ವಿರೋಧಿಸಿದ ಚೀನಾ ಅಗತ್ಯ ಮತಗಳನ್ನು ಪಡೆಯಲು ಸಾಧ್ಯವಾಗದೇ ಸೋಲು ಅನುಭವಿಸಿದೆ.
ಯುಎನ್ ಎಕನಾಮಿಕ್ ಅಂಡ್ ಸೋಶಿಯಲ್ ಕೌನ್ಸಿಲ್ (ಇಕೋಸಾಕ್) ನಾರ್ಕೋಟಿಕ್ ಡ್ರಗ್ಸ್ ಆಯೋಗ ಮತ್ತು ಎಚ್ ಐವಿ/ಏಡ್ಸ್ ಕುರಿತ ಜಂಟಿ ಯುಎನ್ ಕಾರ್ಯಕ್ರಮದ ಕಾರ್ಯಕ್ರಮ ಸಮನ್ವಯ ಮಂಡಳಿಗೆ ಬುಧವಾರ ನಡೆದ ಎರಡು ಚುನಾವಣೆಗಳಲ್ಲಿ ಭಾರತವನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಏಷ್ಯಾ ಪೆಸಿಫಿಕ್ ಪ್ರದೇಶಕ್ಕೆ ಮೀಸಲಿಟ್ಟ ಸ್ಥಾನಗಳಿಗಾಗಿ ಚೀನಾದೊಂದಿಗೆ ಭಾರತ ಸ್ಪರ್ಧೆ ಮಾಡಿತ್ತು. ಅಂಕಿಅಂಶ ಆಯೋಗದ ಚುನಾವಣೆಯಲ್ಲಿ, ಭಾರತವು ಮೊದಲ ಸುತ್ತಿನಲ್ಲಿ ಏಷ್ಯಾ ಪೆಸಿಫಿಕ್ ಪ್ರದೇಶದ ಎರಡು ಸ್ಥಾನಗಳಲ್ಲಿ 53 ಮತಗಳಲ್ಲಿ 46 ಮತಗಳನ್ನು ಪಡೆದುಕೊಂಡಿತು. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು, “ಅಂಕಿಅಂಶ, ವೈವಿಧ್ಯತೆ ಮತ್ತು ಜನಸಂಖ್ಯಾ ಕ್ಷೇತ್ರದಲ್ಲಿನ ಭಾರತದ ಪರಿಣತಿಯು ಯುಎನ್ ಸ್ಟ್ಯಾಟಿಸ್ಟಿಕಲ್ ಕಮಿಷನ್‌ನಲ್ಲಿ ಸ್ಥಾನವನ್ನು ಗಳಿಸಿದೆ ಎಂದು ಟ್ವೀಟ್ ಮಾಡಿದ್ದಾರೆ. “ಸ್ಪರ್ಧಾತ್ಮಕ ಚುನಾವಣೆಯಲ್ಲಿ ಭಾರತ ಗೆದ್ದಿರುವುದಕ್ಕೆ ಭಾರತದ ಯುಎನ್ ಮಿಷನ್ ತಂಡವನ್ನು ಅಭಿನಂದಿಸಿದ್ದಾರೆ. ಅಂಕಿಅಂಶ ಆಯೋಗವು “ವಿಶ್ವದಾದ್ಯಂತದ ಸದಸ್ಯ ರಾಷ್ಟ್ರಗಳ ಮುಖ್ಯ ಸಂಖ್ಯಾಶಾಸ್ತ್ರಜ್ಞರನ್ನು ಒಟ್ಟುಗೂಡಿಸುವ ಜಾಗತಿಕ ಅಂಕಿಅಂಶ ವ್ಯವಸ್ಥೆಯ ಅತ್ಯುನ್ನತ ಸಂಸ್ಥೆಯಾಗಿದೆ. ಪ್ರಪಂಚದಾದ್ಯಂತ ವ್ಯಾಪಕವಾದ ರಾಜತಾಂತ್ರಿಕ ಮತ್ತು ಆರ್ಥಿಕ ಪ್ರಚಾರಗಳನ್ನು ಮಾಡಿದ್ದರೂ ಸ್ಟ್ಯಾಟಿಸ್ಟಿಕಲ್ ಕಮಿಷನ್ ಚುನಾವಣೆಯಲ್ಲಿ ಚೀನಾ ಕೇವಲ 19 ಮತಗಳನ್ನು ಪಡೆದುಕೊಂಡು ದಕ್ಷಿಣ ಕೊರಿಯಾಕ್ಕಿಂತಲೂ ಹಿಂದುಳಿದಿರುವುದು ಆಶ್ಚರ್ಯಕರವಾಗಿದೆ.