ಕಥುವಾ ಪ್ರಕರಣ: ಲಂಡನ್ ನಲ್ಲಿ ಮೌನ ಮುರಿದ ಪ್ರಧಾನಿ ಮೋದಿ

ಕಥುವಾ ಪ್ರಕರಣ: ಲಂಡನ್ ನಲ್ಲಿ ಮೌನ ಮುರಿದ ಪ್ರಧಾನಿ ಮೋದಿ

SRJ   ¦    Apr 19, 2018 12:07:18 PM (IST)
ಕಥುವಾ ಪ್ರಕರಣ: ಲಂಡನ್ ನಲ್ಲಿ ಮೌನ ಮುರಿದ ಪ್ರಧಾನಿ ಮೋದಿ

ಲಂಡನ್: ಕಥುವಾ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣದ ಬಗ್ಗೆ ಮೌನ ಮುರಿದಿರುವ ಪ್ರಧಾನಿ ನರೇಂದ್ರ ಮೋದಿ ಅವರು 'ನಮ್ಮ ಸರಕಾರ ಇರುವಾಗ ಇಷ್ಟು ರೇಪ್ ಆಯ್ತು, ನಿಮ್ಮ ಸರಕಾರ ಇದ್ದಾಗ ಅಷ್ಟು ರೇಪ್ ಆಯ್ತು ಅಂತ ಹೇಳುತ್ತಾ ಕೂರುವುದು ಸರಿಯಲ್ಲ. ಜನರು ತಮ್ಮ ಗಂಡು ಮಕ್ಕಳಿಗೆ, ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಗೌರವಿಸುವುದನ್ನು ಕಲಿಸಬೇಕಾಗಿದೆ' ಎಂದಿದ್ದಾರೆ.

ವೆಸ್ಟ್ ಮಿನಿಸ್ಟರ್ ಸೆಂಟ್ರಲ್ ಹಾಲ್ ನಲ್ಲಿ 'ಭಾರತ್ ಕಿ ಬಾತ್, ಸಬ್ ಕೆ ಸಾಥ್' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು 'ನಮ್ಮ ಹೆಣ್ಣು ಮಕ್ಕಳನ್ನು ನಾವು ಏನು ಮಾಡುತ್ತಿದ್ದೀರಿ, ಎಲ್ಲಿ ಹೋಗುತ್ತಿದ್ದೀರಿ ಎಂದು ಸದಾ ಕೇಳುತ್ತಿರುತ್ತೇವೆ. ಅದೇ ರೀತಿ ನಮ್ಮ ಗಂಡು ಮಕ್ಕಳನ್ನೂ ಕೂಡ ಇದೇ ರೀತಿ ಕೇಳಬೇಕು. ಇಂತಹ ಕೃತ್ಯಗಳನ್ನು ಎಸಗುವವರೂ ಕೆಲವರ ಗಂಡು ಮಕ್ಕಳು ಎಂಬುದನ್ನು ನಾವು ಮರೆಯಬಾರದು' ಎಂದು ಕಿವಿಮಾತನ್ನು ಹೇಳಿದರು.

'ಹೆಣ್ಣು ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ದೇಶಕ್ಕೆ ನಾಚಿಕೆಗೇಡು ಎಂದ ಮೋದಿ ಅವರು, ಇಂತಹ ಅತ್ಯಾಚಾರ ಪ್ರಕರಣಗಳನ್ನು ರಾಜಕೀಯಕ್ಕೆ ತರಬೇಡಿ ಎಂಬುದನ್ನು ಕೂಡ ಸ್ಪಷ್ಟವಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಸರ್ಜಿಕಲ್ ಸ್ಟ್ರೈಕ್, ಆಯುರ್ವೇದ, ತಂತ್ರಜ್ಞಾನ ಸಹಕಾರ, ಸದಸ್ಯತ್ವಕ್ಕೆ ಬೆಂಬಲ ಇತ್ಯಾದಿ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದರು. ಅನಿವಾಸಿ ಭಾರತೀಯರೊಂದಿಗೆ ಮೋದಿ ನಡೆಸಿದ ಈ ಸಂವಾದ ಕಾರ್ಯಕ್ರಮದಲ್ಲಿ ಸುಮಾರು 1500 ಜನರು ಭಾಗವಹಿಸಿದ್ದರು.