ಕಾಶ್ಮೀರದ ತ್ರಾಲ್ ನಲ್ಲಿ ಎನ್ ಕೌಂಟರ್: ಇಬ್ಬರು ಉಗ್ರರ ಹತ್ಯೆ

ಕಾಶ್ಮೀರದ ತ್ರಾಲ್ ನಲ್ಲಿ ಎನ್ ಕೌಂಟರ್: ಇಬ್ಬರು ಉಗ್ರರ ಹತ್ಯೆ

Mar 05, 2017 03:09:27 PM (IST)

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ತ್ರಾಲ್'ನಲ್ಲಿ ಭಾರತೀಯ ಸೇನೆ ಎನ್ ಕೌಂಟರ್ ನಡೆಸಿದ್ದು, ಇಬ್ಬರು ಉಗ್ರರನ್ನು ಹತ್ಯೆ ಮಾಡಿರುವುದಾಗಿ ಭಾನುವಾರ ತಿಳಿದುಬಂದಿದೆ.

ದಕ್ಷಿಣ ಕಾಶ್ಮೀರದ ಪುಲ್ಮಾಮ ಜಿಲ್ಲೆಯ ತ್ರಾಲ್ ಎಂಬ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿದ್ದರು. ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಉಗ್ರರ ಅಡಗಿಕುಳಿತಿರುವ ಬಗ್ಗೆ ಗುಪ್ತಚರ ಇಲಾಖೆ ಸೇನಾ ಪಡೆಗೆ ಮಾಹಿತಿ ನೀಡಿದೆ. ಕೂಡಲೇ ಸಿದ್ಧರಾದ ಯೋಧರು ಕಾರ್ಯಾಚರಣೆ ನಡೆಸಲು ಮುಂದಾಗಿದ್ದರು. ಸೇನಾ ಪಡೆ ಕಾರ್ಯಾಚರಣೆಗಿಳಿಯುತ್ತಿದ್ದಂತೆಯೇ ಕೆಲ ಸ್ಥಳೀಯರು ಸ್ಥಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯನ್ನು ಸೃಷ್ಟಿಸಿದ್ದಾರೆ.

ಸ್ಥಳದಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ಸ್ಥಳೀಯ ಅಧಿಕಾರಿಗಳು ಸೆಕ್ಷನ್ 147 ಜಾರಿ ಮಾಡಿದ್ದರು. ಇದರಂತೆ ನಿಷೇಧಿತ ಸ್ಥಳದಲ್ಲಿ ನಾಲ್ಕರಿಂದ ಹೆಚ್ಚು ಜನರು ಗುಂಪು ಕಟ್ಟಿಹೋಗದಂತೆ ಸೂಚನೆ ನೀಡಲಾಯಿತು. ಅಲ್ಲದೆ, ಕೆಲ ಸಮಯಗಳ ಕಾಲ ಮೊಬೈಲ್ ಇಂಟರ್ ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಸತತ 15 ಗಂಟೆಗಳಿಂದ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ಹಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿವೆ. ಇತ್ತ ಕಾರ್ಯಾಚರಣೆ ಸಮಯದಲ್ಲಿ ಪೊಲೀಸ್ ಪೇದೆ ಮನಜೂರ್ ಅಹ್ಮದ್ ಹುತಾತ್ಮರಾಗಿದ್ದಾರೆ. ಜೊತೆಗೆ ಒಬ್ಬ ಯೋಧ ಹಾಗೂ ಮತ್ತೋರ್ವ ಪೊಲೀಸ್ ಪೇದೆ ಗಾಯಗೊಂಡಿದ್ದಾರೆ.

ಇದೇ ವೇಳೆ ಹುತಾತ್ಮ ಪೊಲೀಸ್ ಮನಜೂರ್ ಅಹ್ಮದ್ ಅವರಿಗೆ ಭದ್ರತಾ ಪಡೆಗಳು ಹಾಗೂ ಪೊಲೀಸ್ ಸಿಬ್ಬಂದಿ ಭಾವಪೂರ್ವಕ ಅಂತಿಮ ನಮನ ಸಲ್ಲಿಸಿದ್ದಾರೆ.