ದೇಶದ ಮೊದಲ ಸ್ಪೇಸ್‌ ಶಟಲ್‌ ಯಶಸ್ವಿ ಉಡಾವಣೆ

ದೇಶದ ಮೊದಲ ಸ್ಪೇಸ್‌ ಶಟಲ್‌ ಯಶಸ್ವಿ ಉಡಾವಣೆ

May 23, 2016 12:53:05 PM (IST)

ಹೊಸದಿಲ್ಲಿ: ದೇಶದ ಮೊದಲ ಮರುಬಳಕೆಯ ಉಪಗ್ರಹ ಉಡ್ಡಯನ ವಾಹಕ ಅಥವಾ "ಸ್ಪೇಸ್‌ ಶಟಲ್‌' ಅನ್ನು ಇಸ್ರೋ ಸೋಮವಾರ ಬೆಳಗ್ಗೆ ಯಶಸ್ವಿಯಾಗಿ ಉಡಾವಣೆ ಮಾಡಿದೆ.

India successfully launches its own 'space shuttle'-1
ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋ ಅಭಿವೃದ್ಧಿಪಡಿಸಿರುವ ಸುಮಾರು 1.7 ಟನ್ ತೂಕವಿರುವ ಈ ಮರುಬಳಕೆ ಮಾಡಬಹುದಾದ ಬಾಹ್ಯಾಕಾಶ ನೌಕೆ (ಆರ್​ಎಲ್ ವಿ-ಟಿಡಿ)ಯನ್ನು ಉಡಾವಣೆ ಮಾಡಲಾಯಿತು. ಬೆಂಗಳೂರಿನ ರಾಷ್ಟ್ರೀಯ ಏರೋಸ್ಪೇಸ್ ಲ್ಯಾಬೋರೇಟರಿಯಲ್ಲಿಯೇ ಪೂರ್ವಭಾವಿ ಪರೀಕ್ಷೆ ನಡೆಸಿ, ಅದರ ಕಾರ್ಯಕ್ಷಮತೆ ಮತ್ತು ವಿಮಾನ ನಿಯಂತ್ರಣ ಪರೀಕ್ಷೆಯನ್ನು ನಡೆಸಲಾಗಿದೆ. ಮಾನವರಹಿತ ಬಾಹ್ಯಾಕಾಶ ಯೋಜನೆಗಳಿಗೆ ಈ ನೌಕೆ ಸಹಕಾರಿ ಎಂದು ವಿಜ್ಞಾನಿಗಳು ವಿವರಿಸಿದ್ದು, ಇದು ಅಮೆರಿಕದ ನೌಕೆಗಿಂತ ಆರು ಪಟ್ಟು ಚಿಕ್ಕದಾಗಿದೆ. ಸಂಪೂರ್ಣ  ಸ್ವದೇಶಿ  ನಿರ್ಮಿತ ಮರು ಬಳಕೆಯ ತಂತ್ರಜ್ಞಾನವು ಮುಂದಿನ 15 ವರ್ಷಗಳಲ್ಲಿ ಇಸ್ರೋ ಕೈಗೆ ಸಿಗಲಿದ್ದು, ಅದರಿಂದ ಉಪಗ್ರಹ ಉಡಾವಣೆ ಖರ್ಚು ಬರೋಬ್ಬರಿ 10 ಪಟ್ಟು ತಗ್ಗಲಿದೆ. ಜತೆಗೆ ಮಾನವಸಹಿತ ಬಾಹ್ಯಾಕಾಶ ಯಾನಗಳಿಗೆ ಭಾರೀ ಉಪಯೋಗವಾಗಲಿದೆ.

ಈ ನೌಕೆಯು ಯಾವ ರೀತಿ ಆಗಸದಿಂದ ಬಂದು ಭೂಮಿಯ ಮೇಲೆ ಇಳಿಯುತ್ತದೆ, ನಿರ್ದಿಷ್ಟ ಸ್ಥಳವನ್ನು ಹೇಗೆ ತಲುಪುತ್ತದೆ ಎಂಬುದನ್ನು ತಿಳಿಯುವುದಾಗಿದೆ. ಸಮುದ್ರದ ಮೇಲೆ ಇಳಿಯುವ ವ್ಯವಸ್ಥೆಯನ್ನು ಇದಕ್ಕೆ ಮಾಡಲಾಗಿಲ್ಲ. ಹೀಗಾಗಿ ಸಮುದ್ರಕ್ಕೆ ಇಳಿಯು ತ್ತಿದ್ದಂತೆಯೇ ಈ ನೌಕೆಯು ಒಡೆದು ಚೂರಾಗಲಿದೆ. ಯೋಜನೆಯ ಅಂತಿಮ ಹಂತದಲ್ಲಿ ರೆಕ್ಕೆಗಳನ್ನು ಹೊಂದಿರುವ ನೌಕೆಯು ಶ್ರೀಹರಿಕೋಟಾದಲ್ಲಿರುವ ನೌಕಾನೆಲೆಗೆ ಸುರಕ್ಷಿತವಾಗಿ ಬಂದು ಇಳಿಯಲಿದೆ ಎಂದು ಇಸ್ರೋ ವಿಜ್ಞಾನಿ ಕಿರಣ್​ಕುಮಾರ್ ವಿವರಿಸಿದ್ದಾರೆ.