ಅಕ್ರಮ ಭೂ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಗುಂಡಿನ ದಾಳಿ: ಇಬ್ಬರು ಪೊಲೀಸರು ಸಾವು

ಅಕ್ರಮ ಭೂ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಗುಂಡಿನ ದಾಳಿ: ಇಬ್ಬರು ಪೊಲೀಸರು ಸಾವು

Jun 03, 2016 07:08:30 PM (IST)

ಮಥುರಾ: ಅಕ್ರಮ ಭೂ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಉದ್ರಿಕ್ತ ಜನರ ಗುಂಪು ಪೊಲೀಸರ ಮೇಲೆ ಗುಂಡಿನ ದಾಳಿ ಮಾಡುವ ಮೂಲಕ ಇಬ್ಬರು ಪೊಲೀಸರು ಸಾವನ್ನಪ್ಪಿರುವ ಭೀಕರ ಘಟನೆ ಗುರುವಾರ ಮಥುರಾದ ಜವಾಹರ್ ಬಾಘ್ ನಲ್ಲಿ ನಡೆದಿದೆ.

ಅಕ್ರಮವಾಗಿ ನಿರ್ಮಿಸಲಾಗಿದ್ದ ಸುಮಾರು 3 ಸಾವಿರ ಮನೆಗಳನ್ನು ಏಕಕಾಲದಲ್ಲಿ ತೆರವುಗೊಳಿಸಲು ಮುಂದಾದಾಗ ಈ ಘಟನೆ ಸಂಭವಿಸಿದ್ದು, ಒತ್ತುವರಿಗೆ ಅನುವು ಮಾಡಿಕೊಡದ ಸ್ಥಳೀಯ ನಿವಾಸಿಗಳು ಪೊಲೀಸರ ವಿರುದ್ಧ ವಾಕ್ಸಮರ ನಡೆಸಿದ್ದಾರೆ. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಪರಿಣಾಮ ಜನರ ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಉದ್ರಿಕ್ತರ ಗುಂಪೊಂದು ನೇರ ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಕಾರ್ಯಾಚರಣೆ ನಿರತ ಓರ್ವ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದ ಮತ್ತೋರ್ವ ಪೊಲೀಸ್ ಕಾನ್ಸ್ ಟೇಬಲ್ ಕೂಡ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಫಲಕಾರಿಯಾಗದೇ ಕಳೆದ ರಾತ್ರಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಸ್ವಾಧೀನ್ ಭಾರತ್ ಆಂದೋಲನ್ ಎಂಬ ಸಂಸ್ಥೆಯ ಕಾರ್ಯಕರ್ತರು ಧರಣಿಯ ನೆಪದಲ್ಲಿ ಎರಡು ವರ್ಷಗಳಿಂದ ಜವಾಹರ್ ಬಾಘ್ ಪ್ರದೇಶವನ್ನು ವಶದಲ್ಲಿಟ್ಟುಕೊಂಡಿದ್ದಾರೆಂಬ ಆರೋಪ ಕೇಳಿಬಂದಿತ್ತು. ಈ ಪ್ರತಿಭಟನಾಕಾರರನ್ನು ಜಾಗ ಖಾಲಿ ಮಾಡಿಸುವಂತೆ ಜಿಲ್ಲಾಡಳಿತ ಪೊಲೀಸರಿಗೆ ಆದೇಶ ನೀಡಿತ್ತು. ಹೀಗಾಗಿ ನಿನ್ನೆ ಪೊಲೀಸರು ತೆರವಿಗೆ ಮುಂದಾದಗ ಉದ್ರಿಕ್ತ ಗುಂಪು ಪೊಲೀಸರ ಮೇಲೆಯೇ ಗುಂಡು ಹಾರಿಸಿ ಪೊಲೀಸರನ್ನು ಸಾಯಿಸಿದ್ದಾರೆ.