ಅತ್ಯಾಚಾರ ಪ್ರಕರಣ: ಅಸರಾಂ ಬಾಪು ದೋಷಿ ಎಂದ ನ್ಯಾಯಾಲಯ

ಅತ್ಯಾಚಾರ ಪ್ರಕರಣ: ಅಸರಾಂ ಬಾಪು ದೋಷಿ ಎಂದ ನ್ಯಾಯಾಲಯ

SRJ   ¦    Apr 25, 2018 12:29:02 PM (IST)
ಅತ್ಯಾಚಾರ ಪ್ರಕರಣ: ಅಸರಾಂ ಬಾಪು ದೋಷಿ ಎಂದ ನ್ಯಾಯಾಲಯ

ಜೋಧಪುರ: ಐದು ವರ್ಷದ ಹಿಂದಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಘೋಷಿತ ದೇವಮಾನವ ಅಸರಾಮ್ ಬಾಪು ಅವರು ದೋಷಿ ಎಂದು ಬುಧವಾರ ಜೋಧಪುರ ಎಸ್.ಸಿ.ಟಿ ನ್ಯಾಯಾಲಯ ಘೋಷಿಸಿದೆ.

77ರ ಹರೆಯದ ಅಸರಾಂ ಬಾಪು ಅವರಿಗೆ ಶಿಕ್ಷೆಯ ಪ್ರಮಾಣವನ್ನು ಇನ್ನಷ್ಟೇ ಘೋಷಿಸಬೇಕಿದೆ. ಅಸರಾಂ ಸಹಿತ ಇನ್ನುಳಿದ ಐವರು ಆರೋಪಿಗಳೂ ತಪಿತಸ್ಥರು ಎಂದು ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, ನ್ಯಾಯಾಧೀಶ ಮಧುಸೂಧನ್ ಶರ್ಮಾ ಅವರು ತೀರ್ಪು ಪ್ರಕಟಿಸಿದ್ದಾರೆ.

2013 ಆಗಸ್ಟ್ 13 ರಂದು ಅಸರಾಂ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಛಿಂದ್ವಾರದಲ್ಲಿರುವ ಅಸಾರಾಂ ಅವರ ಆಶ್ರಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಉತ್ತರಪ್ರದೇಶದ ಷಹಜಹಾನ್ ಪುರದ ಬಾಲಕಿ ದೂರು ನೀಡಿದ್ದರು.

ಬಾಲಕಿಯ ದೂರನ್ನು ಆಧರಿಸಿ 2013ರ ಸೆಪ್ಟೆಂಬರ್ 1ರಂದು ಇಂದೋರ್ ನಲ್ಲಿ ಅಸಾರಾಂ ಅವರನ್ನು ಬಂಧಿಸಿ, ಜೋಧಪುರಕ್ಕೆ ಕರೆತರಲಾಗಿತ್ತು. 2013ರ ಸೆಪ್ಟೆಂಬರ್ 2ರಿಂದ ಅಸಾರಾಂ ನ್ಯಾಯಾಂಗ ವಶದಲ್ಲಿದ್ದರು.

ಇದೀಗ ಕಳೆದ ಐದು ವರ್ಷಗಳಿಂದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದೆ. ತೀರ್ಪಿನ ಹಿನ್ನಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ 378 ಮಂದಿಯನ್ನು ಜೋಧಪುರ ಪೊಲೀಸರು ಬಂಧಿಸಿದ್ದರು.